×
Ad

ಲಾಭಾಂಶದಲ್ಲಿ ಮಿನರಲ್ಸ್ ಕಾರ್ಪೊರೇಷನ್ ಮುಂಚೂಣಿ : ಎಸ್.ಎಸ್.ಮಲ್ಲಿಕಾರ್ಜುನ್

Update: 2025-01-02 21:47 IST

ಎಸ್.ಎಸ್.ಮಲ್ಲಿಕಾರ್ಜುನ್

ಬೆಂಗಳೂರು : ಸರಕಾರದ ಸಂಸ್ಥೆಗಳಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮುಂಚೂಣಿಯಲ್ಲಿದ್ದು, ಸ್ಥಗಿತಗೊಂಡಿರುವ ಕೆಲವು ಗಣಿಗಳ ಪುನರ್ ಪ್ರಾರಂಭಕ್ಕೆ ಕ್ರಮವಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಹಾಗೂ ಟೇಬಲ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮುಂದಿನ ದಿನಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಇನ್ನು ಹೆಚ್ಚಿನ ಲಾಭಾಂಶಗಳನ್ನು ಗಳಿಸುವ ದೃಷ್ಠಿಯಿಂದ ಹೊಸ ಗಣಿಗುತ್ತಿಗೆಗಳ ಅನುಮೋದನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸ್ಥಗಿತಗೊಂಡಿರುವ ಕೆಲವು ಗಣಿಗಳ ಪುನರ್ ಪ್ರಾರಂಭಕ್ಕೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ಮಾನವ ಸಂಪನ್ಮೂಲ ಕೊರತೆಯನ್ನು ನೀಗಿಸಲು ಮತ್ತು ಪುನರ್ ಪ್ರಾರಂಭವಾಗುತ್ತಿರುವ ಗಣಿಗಳ ಅವಶ್ಯಕತೆಯಂತೆ ಹೊಸದಾಗಿ ಉದ್ಯೋಗಿಗಳ ನೇಮಕಕ್ಕೆ ಕ್ರಮವಹಿಸಲಾಗಿದೆ. ಇನ್ನೂ, ಪ್ರತಿ ವರ್ಷ ತನ್ನ ಲಾಭಾಂಶದ ಶೇ.30ರಷ್ಟು ಮೊತ್ತವನ್ನು ಹಾಗೂ ಕಳೆದ ಸಾಲಿನಿಂದ ಲಭ್ಯವಿರುವ ಹೆಚ್ಚುವರಿ ಮೊತ್ತದ ಮೇಲೆ ಶೇ.30ರಷ್ಟು ವಿಶೇಷ ಡಿವಿಡೆಂಡ್ ಮೊತ್ತವಾಗಿ ಸರಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಜತೆಗೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 15ರಿಂದ 20 ಕೋಟಿ ನೀಡುತ್ತಿದ್ದು, ಲಾಭಾಂಶದಲ್ಲಿ ಶೇ.2ರಷ್ಟು ಸಿಎಸ್‍ಆರ್‌ಗೆ ಉಪಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸ್ಥೆಯು ಗಣಿ ಚಟುವಟಿಕೆಗಳ ಜೊತೆ ಇತರೆ ಚಟುವಟಿಕೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ತೊಡಗಿದ್ದು ಇತ್ತೀಚೆಗೆ ರೇಷ್ಮೇ ಇಲಾಖೆಯ ಜೊತೆ ಜಂಟಿ ಸಹಭಾಗಿತ್ವದಲ್ಲಿ 666 ಕೋಟಿಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.

ಇದೇ ಸಂದರ್ಭದಲ್ಲಿ 2025ನೆ ವರ್ಷದ ಈ ಸಂಸ್ಥೆಯ ನೂತನ ಡೈರಿಯನ್ನು ಕೆಎಸ್‍ಎಂಸಿಎಲ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಪಾಟೀಲ್ ಅನಾವರಣಗೊಳಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ನವೀನ್ ಕುಮಾರ್ ರಾಜು ಸೇರಿದಂತೆ ಪ್ರಮುಖರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News