148 ಬಿಎಂಟಿಸಿ ಎಲೆಕ್ಟ್ರಿಕ್ ಬಸ್‍ಗಳಿಗೆ ಚಾಲನೆ
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಎಸಿ ವೋಲ್ವೋ ಸೇರಿದಂತೆ 6,900 ಬಸ್‍ಗಳಿದ್ದು, ಈಗ 148 ಎಲೆಕ್ಟ್ರಿಕ್ ಬಸ್‍ಗಳು ಸೇರ್ಪಡೆಯಾಗುತ್ತಿದೆ. ಈಗ ಒಟ್ಟು 7,048 ಬಸ್‍ಗಳನ್ನು ಬಿಎಂಟಿಸಿ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಬಸ್‍ಗಳು 12 ವರ್ಷಗಳ ಕಾಲ ನಗರದಲ್ಲಿ ಸಂಚಾರ ಮಾಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಶಾಂತಿನಗರದಲ್ಲಿ 148 ಹೊಸ ಎಲೆಕ್ಟ್ರಿಕ್ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಸ್‍ಗಳಿಗೆ ಕಂಡಕ್ಟರ್ ಬಿಎಂಟಿಸಿ ನಿಗಮದಿಂದ ನೇಮಕ ಮಾಡಿದರೆ, ಡ್ರೈವರ್‍ಗಳು ಎಲೆಕ್ಟ್ರಿಕ್ ಬಸ್ ಕಂಪೆನಿಯಿಂದ ಕೆಲಸ ಮಾಡಲಿದ್ದಾರೆ. ಈ 148 ಬಸ್‍ಗಳು ನಗರದ 30 ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ ಎಂದು ಅವರು ಮಾಹಿತಿ ನೀಡಿದರು.
ದಿನನಿತ್ಯ ಉದ್ಯೋಗಕ್ಕೆ ಹೋಗುವವರಿಗೆ ಪೀಕ್‍ಅವರ್ ಗಳಲ್ಲಿ ತಡವಾಗುತ್ತದೆ. ಹೀಗಾಗಿ ದೂರ ಪ್ರಯಾಣ ಇರುವ ಕಡೆಗಳಲ್ಲಿ ವೇಗದೂತ ಎಕ್ಸ್ ಪ್ರೆಸ್ ಸೇವೆಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಕನಿಷ್ಟ 20 ನಿಮಿಷ ಸಮಯ ಉಳಿತಾಯವಾಗುತ್ತಿದೆ. ಪ್ರಸ್ತುತ 44 ಬಸ್‍ಗಳು ಹಾಗೂ 348 ಸುತ್ತುವಳಿಗಳನ್ನು ಹೊಂದಿದೆ. ಇದಕ್ಕೆ ಇತರ ಬಸ್‍ಗಳದ್ದೆ ದರ ಇದೆ ಎಂದು ಅವರು ಮಾಹಿತಿ ನೀಡಿದರು.
ಸಂಸ್ಥೆಯಲ್ಲಿರುವ ಡಿಸೇಲ್ ಬಸ್‍ಗಳ ನಿರ್ವಹಣೆಗಾಗಿ ಒಂದು ದಿನಕ್ಕೆ 77 ಸಾವಿರ ಲೀಟರ್ ಡಿಸೇಲ್ ಬೇಕಾಗುತ್ತದೆ. ಇದರಿಂದ ನಗರದಲ್ಲಿ ಹೆಚ್ಚು ಮಾಲಿನ್ಯವಾಗುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಬಸ್‍ಗಳಾದ ಎಲೆಕ್ಟ್ರಿಕ್ ಬಸ್‍ಗಳು ನಗರದಲ್ಲಿ ಸಂಚರಿಸುವಂತೆ ಮಾಡಿ, ಮಾಲಿನ್ಯ ಕಡಿಮೆಯಾಗುತ್ತದೆ. ಇನ್ನು ಮೂರು ವರ್ಷದೊಳಗೆ ನಗರದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕಲ್ ಬಸ್ ಹೊಂದಿರುವ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸಚಿವರು ಹೇಳಿದರು.
ಎಲೆಕ್ಟ್ರಿಕ್ ಬಸ್‍ಗಳ ವಿಶೇಷತೆಗಳು
•ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್‍ಗಳು.
•12ಮೀ ಉದ್ದ, 400ಮಿಮೀ ಎತ್ತರ ಹವಾನಿಯಂತ್ರಿತವಲ್ಲದ ವಿದ್ಯುತ್ ಚಾಲಿತ ಬಸ್‍ಗಳಾಗಿವೆ.
•ಒಂದು ಭಾರಿ ಚಾರ್ಜ್‍ಗೆ 200 ಕಿ.ಮೀ ಚಲಿಸುತ್ತವೆ.
• 148 ಬಸ್‍ಗಳು ಘಟಕ-4 ಜಯನಗರದಿಂದ ಸಂಚರಿಸಲಿವೆ.
•ಒಂದು ಕಿ.ಮೀ. ಗೆ 41.1 ಪೈಸೆ ರೂ. ಗುತ್ತಿಗೆ ಆಧಾರದಲ್ಲಿ ಈ 148 ಬಸ್‍ಗಳು ಸಂಚಾರ ಮಾಡಲಿವೆ.
•30 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.