ಮತಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕಡಿತಗೊಳಿಸಲು ಫಾರಂ-7 ದುರುಪಯೋಗ : ಜಮಾಅತೆ ಇಸ್ಲಾಮೀ ಹಿಂದ್
ಸಾಂದರ್ಭಿಕ ಚಿತ್ರ | Photo credit : PTI
ಬೆಂಗಳೂರು : ರಾಜ್ಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಅರ್ಹ ಮುಸ್ಲಿಮ್ ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಮತ್ತು ಸಾಮೂಹಿಕವಾಗಿ ಕಡಿತಗೊಳಿಸುವ ಸಲುವಾಗಿ ‘ಫಾರಂ-7’ರ ಮೂಲಕ ಅಕ್ರಮ ಆಕ್ಷೇಪಗಳನ್ನು ಸಲ್ಲಿಸುತ್ತಿರುವುದು ಆಘಾತಕಾರಿ ಹಾಗೂ ಗಂಭೀರ ಬೆಳವಣಿಗೆಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಆಕ್ರೋಶ ವ್ಯಕ್ತಪಡಿಸಿದೆ.
ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳ್ಗಾಮಿ, ಇಂತಹ ಪ್ರಜಾಪ್ರಭುತ್ವದ ಬುನಾದಿಯಾದ ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಹಕ್ಕಿಗೆ ಧಕ್ಕೆ ತರುತ್ತಿರುವ ಈ ಅಕ್ರಮ ಕೃತ್ಯವನ್ನು ಖಂಡಿಸುತ್ತೇವೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಕೇವಲ ನಕಲಿ ಸಹಿಗಳನ್ನು ಬಳಸಿ ಅಥವಾ ಸುಳ್ಳು ಮಾಹಿತಿ ನೀಡಿ ಸಾವಿರಾರು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದಿದ್ದಾರೆ.
ಒಂದೇ ವಿಳಾಸದಿಂದ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹಾಗೂ ಮುಸ್ಲಿಮ್ ಮತದಾರರ ಪ್ರಾಬಲ್ಯವಿರುವ ಮತಗಟ್ಟೆಗಳನ್ನೇ ಗುರಿಯಾಗಿಸಿಕೊಂಡು ಇಂತಹ ನಕಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಮತಗಟ್ಟೆ ಏಜೆಂಟರು ಈ ಅಕ್ರಮ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿ ತನ್ನ ಅಥವಾ ತನ್ನ ಕುಟುಂಬದವರ ಹೆಸರನ್ನು ಹೊರತುಪಡಿಸಿ, ನಿಯಮಬಾಹಿರವಾಗಿ ಸಾಮೂಹಿಕವಾಗಿ ನೂರಾರು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲದಿದ್ದರೂ ಬಿಎಲ್‌ಒಗಳು ಅವುಗಳನ್ನು ಸ್ವೀಕರಿಸಿರುವುದು ಕಂಡು ಬಂದಿದೆ ಎಂದು ಮುಹಮ್ಮದ್ ಸಾದ್ ಬೆಳ್ಗಾಮಿ ತಿಳಿಸಿದ್ದಾರೆ.