×
Ad

ಬೆಂಗಳೂರು | ಊಟಕ್ಕೆ ಕುಳಿತುಕೊಳ್ಳುವ ಜಾಗಕ್ಕಾಗಿ ಆರಂಭಗೊಂಡ ಗಲಾಟೆ ಕೊಲೆಯಲ್ಲಿ ಅಂತ್ಯ : ಆರೋಪಿ ಬಂಧನ

Update: 2024-09-30 21:32 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಊಟಕ್ಕೆ ಕುಳಿತುಕೊಳ್ಳುವ ಜಾಗಕ್ಕಾಗಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಹನುಮಂತನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಹರೀಶ್ ಎಂದು ಗುರುತಿಸಲಾಗಿದೆ. ಸೆ.24ರಂದು ಶ್ರೀನಿವಾಸನಗರದ 11ನೇ ಕ್ರಾಸ್‍ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಜಿತ್(30) ಎಂಬಾತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈಯ್ಯಲಾಗಿತ್ತು. ಹತ್ಯೆಯಾಗಿರುವ ಅಜಿತ್ ಹಾಗೂ ಆರೋಪಿ ಹರೀಶ್ ಇಬ್ಬರು ಕೃತ್ಯ ನಡೆದಿದ್ದ ಕಟ್ಟಡದಲ್ಲಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಸೆ.24ರಂದು ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡುತ್ತಿದ್ದ ಅಜಿತ್‍ನ ಬಳಿ ಬಂದಿದ್ದ ಹರೀಶ್, ‘ಅದು ನಾನು ಕುಳಿತು ಊಟ ಮಾಡುವ ಜಾಗ, ಎದ್ದೇಳು’ ಎಂದಿದ್ದ. ಅಲ್ಲಿಂದ ಎದ್ದಿದ್ದ ಅಜಿತ್ ಕಟ್ಟಡದ ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತಿದ್ದ. ಅಲ್ಲಿಗೂ ಹೋಗಿದ್ದ ಹರೀಶ್, ‘ನಾನು ಇಲ್ಲಿ ಕುಳಿತುಕೊಳ್ಳಬೇಕು’ ಎಂದು ಗಲಾಟೆ ಆರಂಭಿಸಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಲ್ಲನ್ನು ಅಜಿತ್ ತಲೆ ಮೇಲೆ ಹರೀಶ್ ಎತ್ತಿಹಾಕಿ ಹತ್ಯೆಗೈದಿದ್ದ ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹನುಮಂತನಗರ ಠಾಣಾ ಪೊಲೀಸರು ಆರೋಪಿ ಹರೀಶ್‍ನನ್ನು ಬಂಧಿಸಿದ್ದು, ಅಪರಾಧ ಹಿನ್ನಲೆಯುಳ್ಳ ಹರೀಶ್ ಈ ಹಿಂದೆ ಕೊರಟಗೆರೆಯಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News