×
Ad

ಪ್ರಜ್ವಲ್ ರೇವಣ್ಣ ಪ್ರಕರಣ | ‘ಹಾಸನ ಚಲೋ’ಗೆ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲ

Update: 2024-05-27 19:59 IST

ಪ್ರಜ್ವಲ್ ರೇವಣ್ಣ

ಬೆಂಗಳೂರು : ಲೈಂಗಿಕ ದೌರ್ಜನ್ಯದ ಆರೋಪಿಯಾದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ, ಸಂತ್ರಸ್ತ ಮಹಿಳೆಯರ ಘನತೆಯನ್ನು ಕಾಪಾಡಲು ಒತ್ತಾಯಿಸಿ ರಾಜ್ಯದ ಜನಪರ ಚಳವಳಿಯಿಂದ ಮೇ 30ರಂದು ನಡೆಯಲಿರುವ ‘ಹಾಸನ ಚಲೋ’ಗೆ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲಿಸಿದೆ.

ಪ್ರಜ್ವಲ್ ರೇವಣ್ಣ ಹಾಗೂ ಈ ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾದ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು. ಬೃಹತ್ ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಬೆಂಬಲಿಸಲಿದ್ದು, ಈ ಹೋರಾಟವನ್ನು ಯಶಸ್ವಿಗೊಳಿಸಲು ಎಲ್ಲ ಸಂಘಟನೆಗಳು ಶ್ರಮಿಸಬೇಕು.

ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡಬೇಕು. ಹಾಗೂ ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನಿನ ನೆರವು, ಸೂಕ್ತರಕ್ಷಣೆ, ಪುನರ್ವಸತಿ, ಪರಿಹಾರವನ್ನು ಸರಕಾರ ನೀಡಬೇಕು. ಸಂತ್ರಸ್ತೆಯರ ವಿಡಿಯೋಗಳನ್ನು ಸಂಗ್ರಹಿಸಿ, ಪೆನ್‌ಡ್ರೈವ್ ಮತ್ತು ಮಾಧ್ಯಮಗಳ ಮೂಲಕ ಹಂಚಿದ ಪ್ರತಿಯೊಬ್ಬರನ್ನು ವಿಚಾರಣೆಗೊಳಪಡಿಸಿ ಬಂಧಿಸಬೇಕು. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಅಳಿಸಲು ಸೂಕ್ತ ಕ್ರಮ ವಹಿಸಬೇಕು.

ಲೈಂಗಿಕ ಬಲಿಪಶುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೇ, ನಿಜವಾದ ಅಪರಾಧಿಯನ್ನು ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತ ಮಹಿಳೆಯರಿಗೆ ಆತ್ಮಸ್ತೈರ್ಯ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಪ್ರಕಟನೆಯಲ್ಲಿ ಆಗ್ರಹಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News