×
Ad

ಕೆಇಎ ನಡೆಸಿದ ನೇಮಕಾತಿ ಪರೀಕ್ಷೆ | ಇಬ್ಬರು ಮೇಲ್ವಿಚಾರಕರಿಂದ ಪರೀಕ್ಷಾ ಕರ್ತವ್ಯಲೋಪ, ವೆಬ್ ಕಾಸ್ಟಿಂಗ್‍ನಿಂದ ಪತ್ತೆ

Update: 2024-07-14 22:40 IST

ಬೆಂಗಳೂರು : ಬಿಎಂಟಿಸಿ, ಕೆಎಸ್‌ಆರ್‌ಟಿಸಿಯ ಖಾಲಿ ಹುದ್ದೆಗಳನ್ನು ತುಂಬಲು ರವಿವಾರ(ಜು.14) ನಡೆದ ಪರೀಕ್ಷೆ ವೇಳೆ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿರುವುದನ್ನು ವೆಬ್‍ಕಾಸ್ಟಿಂಗ್ ನಿಂದ ಪತ್ತೆ ಹಚ್ಚಲಾಗಿದೆ. ಈ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಪತ್ರ ಬರೆದಿದ್ದಾರೆ.

ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ಎಸ್‍ಜೆ ಪಾಲಿಟೆಕ್ನಿಕ್‍ನ ಕೊಠಡಿ ಸಂಖ್ಯೆ 102 ರಲ್ಲಿ(ಕೇಂದ್ರ ಸಂಕೇತ 112) ಕೊಠಡಿ ಮೇಲ್ವಿಚಾರಕರಾದ ಉಪನ್ಯಾಸಕ ಸಾಜಿದ್ ಪರೀಕ್ಷೆ ನಡೆಯುವಾಗ ಮೊಬೈಲ್‍ನಲ್ಲಿ ಮಾತನಾಡುತ್ತಿರುವುದನ್ನು ಇಲ್ಲಿನ ಕೆಇಎ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನಿಂದ ಗಮನಿಸಲಾಗಿದೆ. ಇದು ಪರೀಕ್ಷಾ ಕರ್ತವ್ಯ ಲೋಪವಾದ್ದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಾಗಿದೆ.

ಕಲಬುರಗಿಯ ನೆಹರು ಗಂಜ್‍ನಲ್ಲಿರುವ ಶ್ರೀ ಶಬರಯ್ಯ ಗಾಡ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಮಾತಾಡಿಕೊಳ್ಳುತ್ತಿರುವುದು ಹಾಗೂ ಈ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿ ಮತ್ತೊಬ್ಬ ಅಭ್ಯರ್ಥಿಗೆ ಉತ್ತರ ಬರೆಯಲು ನೆರವು ನೀಡಿರುವುದು ಕಂಡು ಬಂದಿದೆ. ಈ ವೇಳೆ, ಕೊಠಡಿ ಮೇಲ್ವಿಚಾರಕರು ಅಲ್ಲೇ ಇದ್ದರೂ ಅದನ್ನು ತಡೆಯದೆ ನಿರ್ಲಕ್ಷ್ಯ ಮಾಡಿರುವುದು ಕಂಡು ಬಂದಿದೆ. ಇದರ ಬಗ್ಗೆ ಕೊಠಡಿ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿ ಅವರಿಗೆ ಪ್ರಸನ್ನ ಅವರು ಪತ್ರ ಬರೆದಿದ್ದಾರೆ.

ತಾನು ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ಸಲುವಾಗಿ ಕೆಇಎ ಇದೇ ಮೊದಲ ಬಾರಿಗೆ ಜು.13 ಮತ್ತು ಜು.14ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿತ್ತು.

ಶೇ.68ರಷ್ಟು ಹಾಜರಿ: ರವಿವಾರ ನಡೆದ ಪರೀಕ್ಷೆಯಲ್ಲಿ ಒಟ್ಟು ಶೇ.68 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಶನಿವಾರ ನಡೆದ ಪರೀಕ್ಷೆ ಯಲ್ಲಿ ಶೇ.34ರಷ್ಟು ಹಾಜರಿದ್ದರು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News