×
Ad

ಹಜ್‍ಯಾತ್ರೆ-2026 | ಸೌದಿ ಅರೇಬಿಯಾ ಸರಕಾರ ನೀಡಿರುವ ಸೂಚನೆಗಳನ್ನು ಪಾಲಿಸಿ : ಶೌಕತ್ ಅಲಿ ಸುಲ್ತಾನ್

Update: 2025-12-04 23:55 IST

ಬೆಂಗಳೂರು : ಸೌದಿ ಅರೇಬಿಯಾ ಸರಕಾರದ ಹಜ್ ಮತ್ತು ಉಮ್ರಾ ಸಚಿವಾಲಯದಿಂದ ಪ್ರಕಟಿಸಲಾದ ವೇಳಾಪಟ್ಟಿಯ ಪ್ರಕಾರ 2026ನೆ ಸಾಲಿನ ಹಜ್ ಯಾತ್ರೆಗೆ ಸಂಬಂಧಿಸಿದ ವಸತಿ ಹಾಗೂ ಸೇವಾ ಒಪ್ಪಂದಗಳನ್ನು ಅಂತಿಮಗೊಳಿಸುವ ದಿನಾಂಕ 2026ರ ಫೆಬ್ರವರಿ 1. ವಸತಿ, ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಸೇವೆಗಳ ವ್ಯವಸ್ಥೆಗಾಗಿ ಈ ಕಡ್ಡಾಯ ಒಪ್ಪಂದಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕ ರಾಜ್ಯ ಹಜ್ ಆಯೋಜಕರ ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮೇಲಿನ ವೇಳಾಪಟ್ಟಿಯನ್ನು ಹಾಗೂ ಹಜ್ ಗ್ರೂಪ್ ಆಯೋಜಕರು(ಎಚ್‍ಜಿಒ) ಮತ್ತು ಖಾಸಗಿ ಟೂರ್ ಆಪರೇಟರ್‍ಗಳು(ಪಿಟಿಒ) ಪೂರ್ಣಗೊಳಿಸಬೇಕಾದ ವಿವಿಧ ಪೂರ್ವ ಸಿದ್ಧತಾ ಅಗತ್ಯಗಳನ್ನು ಪರಿಗಣಿಸಿ, ಇವರ ಮೂಲಕ ಹಜ್ ನಿರ್ವಹಿಸಲು ಬಯಸುವ ಯಾತ್ರಿಕರು ತಮ್ಮ ಬುಕ್ಕಿಂಗ್ ಅನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವಂತೆ ಕೋರಿದ್ದಾರೆ.

ಮೀನಾ ಮತ್ತು ಅರಫಾತ್ ಸೇವೆಗಳು, ಮಕ್ಕಾ ಮತ್ತು ಮದೀನಾದಲ್ಲಿ ವಸತಿ, ಹೊಟೇಲ್‍ಗಳು, ಕಟ್ಟಡಗಳು, ಸಾರಿಗೆ ಸಂಸ್ಥೆಗಳೊಂದಿಗೆ ಒಪ್ಪಂದಗಳು ಹಾಗೂ ಹಜ್ ಪರವಾನಗಿ (ಪರ್ಮಿಟ್) ಪಡೆಯಲು ಅಗತ್ಯವಿರುವ ಇತರೆ ಕಡ್ಡಾಯ ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಯದೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಯಾತ್ರಿಗಳಿಗೆ ಸಮಸ್ಯೆಗಳು ಎದುರಾಗಬಹುದು ಎಂದು ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ.

ಹಜ್ ಯಾತ್ರಿಕರಿಗೆ ತುರ್ತು ಸೂಚನೆ: ಯಾತ್ರಿಕರು ತಕ್ಷಣ ತಮ್ಮ ಹಜ್ ಯೋಜನೆಗಳನ್ನು ಅಂತಿಮಗೊಳಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ(ಹಜ್ ವಿಭಾಗ)ದಿಂದ ಅನುಮೋದಿತ ಮತ್ತು ಕೋಟಾ ಹಂಚಿಕೆ ಹೊಂದಿರುವ ಹಜ್ ಗ್ರೂಪ್ ಆಯೋಜಕರನ್ನು ತಕ್ಷಣ ಸಂಪರ್ಕಿಸಿ, ತಮ್ಮ ದಾಖಲಾತಿಗಳ ದೃಢೀಕರಣ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

2026ರ ಹಜ್ ಯಾತ್ರೆಯ ವೇಳಾಪಟ್ಟಿಯಂತೆ ಸೌದಿ ಸಚಿವಾಲಯದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಸೇವೆಗಳನ್ನು ದೃಢೀಕರಿಸಿಕೊಳ್ಳಲು ಯಾತ್ರಿಕರು ಯಾತ್ರೆಯ ಮೊತ್ತದ ಮೊದಲನೆ ಕಂತನ್ನು ಡಿ.15, ಎರಡನೆ ಕಂತನ್ನು 2026ನೆ ಸಾಲಿನ ಜ.15ರೊಳಗೆ ಪಾವತಿಸಬೇಕು. ತಮ್ಮ ಆಯೋಜಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹಜ್ ಯಾತ್ರೆಯನ್ನು ಸುಗಮ, ಸುರಕ್ಷಿತ ಮತ್ತು ಉತ್ತಮವಾಗಿ ಸಂಘಟಿಸಲು ಸಹಕರಿಸುವಂತೆ ಶೌಕತ್ ಅಲಿ ಸುಲ್ತಾನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News