ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ : ಹೆಣ್ಣೂರು ಶ್ರೀನಿವಾಸ್
ದಸಂಸ ವತಿಯಿಂದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶ
ಬೆಂಗಳೂರು : ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ. ಪೌರ ಕಾರ್ಮಿಕರ ಮಗನನ್ನು ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಸಾಕಷ್ಟು ಮಾತನಾಡಿದ್ದಾರೆ. ಆರೆಸ್ಸೆಸ್ ನೋಂದಣಿ ಮಾಡಿಸಿಕೊಳ್ಳದೆ, ಲಕ್ಷಾಂತರ ರೂ. ದೇಣೆಗೆ ಪಡೆಯುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಅವರನ್ನು ಓರ್ವ ಕೆಟ್ಟ ಪದಗಳಿಂದ ನಿಂದಿಸಿದ್ದನ್ನು ನಾನು ಗಮನಿಸಿದ್ದೇನೆ. ನಮ್ಮ ಯಾವ ನಾಯಕರೂ ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ಕೊಡಲಿಲ್ಲ. ಖರ್ಗೆ ಅವರ ಪ್ರತಿಕ್ರಿಯೆ ಸರಿಯಾಗಿದೆ ಎಂಬ ಕಾರಣಕ್ಕೆ ನಾನೂ ಸಾರ್ವಜನಿಕವಾಗಿ ಸಮರ್ಥನೆ ಮಾಡಿಕೊಂಡಿದ್ದೇನೆ. ಅದಕ್ಕಾಗಿ ಪ್ರಶ್ನೆಗಳನ್ನೂ ಎದುರಿಸಿದ್ದೇನೆ ಎಂದರು.
ದಲಿತ ಸಮುದಾಯಕ್ಕೆ ಅಪಾಯ ಎದುರಾದಾಗ ಧೈರ್ಯವಾಗಿ ಮಾತನಾಡುವುದೇ ನಿಜವಾದ ನಾಯಕತ್ವ, ಅಧಿಕಾರ ಅಥವಾ ಇನ್ಯಾವುದಾದರೂ ಆಸೆಯಿಂದ ಮಾತನಾಡದೇ ಸುಮ್ಮನಿರುವುದೂ ಕೂಡ ಮನುವಾದಕ್ಕೆ ಸಮವಾಗುತ್ತದೆ. ಸಂಘಪರಿವಾರಕ್ಕೆ ತಿರುಗೇಟು ನೀಡಬೇಕು ಎಂಬ ಕಾರಣಕ್ಕೆ ನಾನು 2 ದಿನಗಳ ಕಾಲ ಮನುಸ್ಮೃತಿಯನ್ನು ಅಧ್ಯಯನ ಮಾಡಿ, ಅದರಲ್ಲಿ ಸುಮಾರು 25 ಅಂಶಗಳನ್ನು ಪಟ್ಟಿ ಮಾಡಿದ್ದೇನೆ. ಮನುಸ್ಮೃತಿಯಲ್ಲಿರುವ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳದೆ ಇರುವುದರಿಂದಲೇ, ಇಂದು ಜಾತಿ ಜಾತಿ ಎಂದು ನಮ್ಮೊಳಗೆ ಜಗಳ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಮನುಸ್ಮೃತಿ ಬರೆದವನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು, ಈ ಬಗ್ಗೆ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ? ನ.26ರ ಸಂವಿಧಾನ ಸಮರ್ಪಣಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆ ರಾಮ ಮಂದಿರದಲ್ಲಿ ಕೇಸರಿ ಧ್ವಜ ಹಾರಿಸಿದರು. ಈ ಮೂಲಕ, ನಾವು ಸಂವಿಧಾನವನ್ನು ಧಿಕ್ಕರಿಸುತ್ತೇವೆ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಆದರೆ, ಈ ಬಗ್ಗೆ ನಮ್ಮಲ್ಲಿ ಯಾರ ರಕ್ತವೂ ಕುದಿಯುತ್ತಿಲ್ಲ ಎಂಬುದೇ ಬೇಸರದ ವಿಷಯ ಎಂದರು.
ಡಿ.6ರಂದು ಬಾಬಾ ಸಾಹೇಬರ ಪರಿನಿಬ್ಬಾಣ ದಿನ ಅವತ್ತೇ, ಬಾಬ್ರಿ ಮಸೀದಿ ಕೆಡವಿದ್ದರು. ಸಂಘಪರಿವಾರದವರು ಹಿಂದೂ ಸಮುದಾಯದ ಹೆಸರಿನಲ್ಲಿ ಬಾಬ್ರಿ ಮಸೀದಿ ಹೊಡೆದರು. ಅವರ ಈ ಹುನ್ನಾರ ಮತ್ತು ಮುಂದೆ ಬರುವ ಅಪಾಯವನ್ನು ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಇಂದು ರಾಜ್ಯದಲ್ಲಿ ಮೀಸಲಾತಿ ಹೆಸರಿನಲ್ಲಿ ಹುನ್ನಾರ, ಒಳ ಮೀಸಲಾತಿ ವಿಚಾರದಲ್ಲಿ ಕುತಂತ್ರ ನಡೆಯುತ್ತಿದೆ. 2012ರ ವರೆಗೆ ಸಂಘಪರಿವಾರದವರು ಒಳಮೀಸಲಾತಿ ವಿಚಾರವಾಗಿ ಮಾತನಾಡೇ ಇಲ್ಲ. ರಾಜ್ಯದ ಹೊಲೆ-ಮಾದಿಗರು ಈವರೆಗೆ ಕಿತ್ತಾಡಿಲ್ಲ. ಇಡೀ ಒಳಮೀಸಲಾತಿಯ ಹೋರಾಟದ ಶಕ್ತಿ ದಲಿತ ಚಳವಳಿ, ಒಳಮೀಸಲಾತಿಗಾಗಿ ಆಯೋಗ ರಚನೆ ಆಗುವುದಕ್ಕೂ ದಲಿತ ಚಳವಳಿಯೇ ಕಾರಣ. ಆಯೋಗ ರಚನೆಯಾಗಿ ವರದಿ ಬಂದ ನಂತರ ಸಂಘಪರಿವಾರ ಪ್ರವೇಶ ಪಡೆಯಿತು. ನಮ್ಮಲ್ಲಿ ಕೆಲವರು ಬಾಯಿ ಮಾತಿಗೆ ಮಾತ್ರ ಅಂಬೇಡ್ಕರ್, ಜೈಭೀಮ್ ಮತ್ತು ಬಿ.ಕೃಷ್ಣಪ್ಪ ಹೆಸರು ಹೇಳುವವರಿದ್ದಾರೆ. ಅವರು ಸಂಘಪರಿವಾರದ ವಿರುದ್ಧ ಅಂದು ಮಾತನಾಡಲೇ ಇಲ್ಲ ಎಂದು ತಿಳಿಸಿದರು.
ದಲಿತ ಸಂಘಟನೆ ಯಾರದ್ದೋ ಮನೆಯ ಸ್ವತ್ತಲ್ಲ, ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಪ್ಪಿಸಬೇಕು. ನಾವು ವಿದ್ಯಾರ್ಥಿಗಳಿದ್ದಾಗಲೇ ಚಳವಳಿಗೆ ಬಂದವರು. ಆದರೆ, ಇಂದಿನ ವಿದ್ಯಾರ್ಥಿಗಳನ್ನು ನಾವು ಚಳವಳಿಗೆ ತರಲು ಸಾದ್ಯವಾಗುತ್ತಿಲ್ಲ. ಅವರೆಲ್ಲಾ ಸಂಘಪರಿವಾರದ ಕಪಿಮುಷ್ಠಿಗೆ ಸಿಲುಕಿದ್ದಾರೆ. ಈ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಯುವನಾಯಕರಿಗೆ ನಾನು ನಾಯಕತ್ವ ಬಿಟ್ಟುಕೊಡಲು ತಯಾರಿದ್ದೇನೆ ಎಂದು ಅವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ, ದಲಿತ ನಾಯಕ ಎಂ.ದೇವದಾಸ್, ಹೋರಾಟಗಾರರಾದ ಚಂದ್ರು ತರಹುಣಿಸೆ, ಕ್ಯಾಸಂಬಳ್ಳಿ ನಾರಾಯಣ, ಸುರೇಶ್ ಮೆಂಗನ್, ನಂಜುಂಡ ಮೌರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಂವಿಧಾನ ರಕ್ಷಿಸುವ ಜೊತೆಗೆ ಮನುಸ್ಮೃತಿ ಏನು ಹೇಳುತ್ತದೆ. ಅದರಲ್ಲಿ ಏನೇನು ಇದೆ ಎನ್ನುವುದು ಗೊತ್ತಾಗಬೇಕು. ಎಲ್ಲ ಮನೆಗಳಿಂದ ಬದಲಾವಣೆ ಪ್ರಾರಂಭವಾಗಬೇಕು. ಮನುವಾದಿಗಳು ನಮ್ಮನ್ನು ಅಧಿಕಾರದಿಂದ ಹೇಗೆ ದೂರ ಇಟ್ಟರು ಎನ್ನುವುದನ್ನು ಗ್ರಾಮಮಟ್ಟದಲ್ಲಿ ಜನರಿಗೆ ತಿಳಿಸುವ ಕಾರ್ಯಕ್ರಮಗಳು ನಡೆಸಬೇಕು. ಸ್ಮೃಶ್ಯ-ಅಸ್ಮೃಶ್ಯತೆ ಹೇಗೆ ಬಂತು. ಎನ್ನುವುದನ್ನು ಬಿಡಿಸಿ ಹೇಳಬೇಕು.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆ ಸಚಿವ