ಕೇಂದ್ರ ಸರಕಾರದ್ದು ಮಿತ್ರಪಕ್ಷಗಳ ಓಲೈಸುವ ಬಜೆಟ್ : ರಾಯರಡ್ಡಿ
ಬೆಂಗಳೂರು : ಕೇಂದ್ರದ ಒಕ್ಕೂಟ ಸರಕಾರ ಯಾವುದೇ ದೂರದೃಷ್ಠಿಯಿಲ್ಲದ, ಮಿತ್ರಪಕ್ಷಗಳನ್ನು ಓಲೈಸುವ ಬಜೆಟ್ ಮಂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಸವರಾಜ್ ರಾಯರಡ್ಡಿ ಟೀಕಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸದೆ ಮಧ್ಯಮ ವರ್ಗದ ಜನರಿಗೆ ಭಾರೀ ನಿರಾಶೆ ಉಂಟು ಮಾಡಲಾಗಿದೆ. ಇದು ಮಿತ್ರಪಕ್ಷಗಳನ್ನು ಓಲೈಸುವ ಬಜೆಟ್ ಆಗಿದ್ದು, ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಭಾರೀ ಅನುದಾನ ಒದಗಿಸಲಾಗಿದೆ ಎಂದರು.
ದೇಶದ ಆರ್ಥಿಕತೆಯ ಇಂಜಿನ್‌ನಂತೆ ಕೆಲಸ ಮಾಡುತ್ತಿದ್ದರೂ ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಯಾವುದೇ ಅನುದಾನ ಒದಗಿಸದೆ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಅವರು ದೂರಿದರು.
ಈ ಕೇಂದ್ರ ಬಜೆಟ್‌ನಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ನೀಡಬೇಕಾದ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನಾಗಲಿ ಅಥವಾ ಬೆಂಗಳೂರಿಗಾಗಿ ಶಿಫಾರಸ್ಸು ಮಾಡಲಾಗಿದ್ದ 6,000 ಕೋಟಿ.ರೂ.ಗಳ ವಿಶೇಷ ಅನುದಾವನ್ನೂ ಸೇರಿಸಿ ಒಟ್ಟು 11,495 ಕೋಟಿ ರೂ.ಗಳನ್ನು ಈ ಬಜೆಟ್‌ನಲ್ಲಿ ಒದಗಿಸದೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಬಸವರಾಜ್ ರಾಯರಡ್ಡಿ ತಿಳಿಸಿದರು.
ಕೇಂದ್ರ ಬಜೆಟ್‌ಗೆ ನಮ್ಮ ಸರಕಾರದ ಗ್ಯಾರಂಟಿ ಯೋಜನಗಳೇ ಪ್ರೇರಣೆಯಾಗಿವೆ. ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ನಮ್ಮ ಅನ್ನಭಾಗ್ಯ, ಗೃಹಲಕ್ಷ್ಮಿ ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳೇ ಪ್ರೇರಣೆ ನೀಡಿದೆ ಎಂದು ಬಸವರಾಜ್ ರಾಯರಡ್ಡಿ ಹೇಳಿದರು.