ವೈದ್ಯರ ರಕ್ಷಣೆಗೆ ಸರಕಾರ ಬದ್ಧ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ನಿಂದನೆ, ಅಗೌರವ ತೋರಿದರೆ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಜಾರಿಗೆ ತರಲಾಗಿದ್ದು, ವೈದ್ಯರ ರಕ್ಷಣೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸರ್ಜಿಕಲ್ ಸೊಸೈಟಿ ಸುವರ್ಣ ಮಹೋತ್ಸವದಲ್ಲಿ ಸಾಧನೆ ಗೈದ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ವೈದ್ಯರು, ಆರೋಗ್ಯ ಸಿಬ್ಬಂದಿಗಳ ರಕ್ಷಣೆ ಮಾಡುವುದರ ಜೊತೆಗೆ ನಕಲಿ ವೈದ್ಯರುಗಳ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ದೇಶ ಮತ್ತು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಶ್ವಮಾನ್ಯತ ಪಡೆದ ವೈದ್ಯರು ನಮ್ಮಲ್ಲಿದ್ದಾರೆ. ಅಂತರಾಷ್ಟ್ರಿಯ ಮಟ್ಟದಲ್ಲಿ ವೈದ್ಯರು ಮತ್ತು ವೈದ್ಯಕೀಯ ಉಪಕರಣಗಳು ನಮ್ಮಲ್ಲಿವೆ. ಕರ್ನಾಟಕದಲ್ಲಿ ಖಾಸಗಿ ಮತ್ತು ಸರಕಾರಿ ಸಂಸ್ಥೆಯಲ್ಲಿ ಅಡಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಉತ್ತಮ ಆಸ್ಪತ್ರೆಗಳು ನಿರ್ಮಾಣವಾಗಿದೆ ಎಂದರು.
ಬಡ ಮತ್ತು ಮಧ್ಯಮವರ್ಗದ ಜನರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಜೊತೆಯಲ್ಲಿ ಖಾಸಗಿ ಆಸ್ಪತ್ರೆ ಸೇವೆ ಮುಖ್ಯ. ಇದಕ್ಕೆ ಸರಕಾರವು ಸೂಕ್ತ ಸಹಕಾರ ನೀಡುತ್ತದೆ ಎಂದ ಅವರು, ಬೆಂಗಳೂರು ಸರ್ಜಿಕಲ್ ಸೊಸೈಟಿ 50ವರ್ಷ ತುಂಬಿದೆ ಎಂದರೆ ಡೊಡ್ಡ ಸಾಧನೆ. ಸರ್ಜಿಕಲ್ ಸೊಸೈಟಿಗೆ ಕಚೇರಿಗಾಗಿ ಜಾಗ ನೀಡಬೇಕು ಎಂದು ಸಿಎಂಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ. ರಾಜಶೇಖರ್ ಸಿ., ಸಿಎಂ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಎಂ.ಕೆ.ರಮೇಶ್, ಬೆಂಗಳೂರು ಸರ್ಜಿಕಲ್ ಸೊಸೈಟಿ ಕಾರ್ಯದರ್ಶಿ ಡಾ.ಮುನಿರೆಡ್ಡಿ ಎಂ.ವಿ. ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.