ರಾಜ್ಯಗಳು ಭಾಷಾ ಅಭಿವೃದ್ಧಿಗೆ ನೀತಿ ರೂಪಿಸಬೇಕು: ಎಂ.ವೀರಪ್ಪ ಮೊಯಿಲಿ
ಬೆಂಗಳೂರು : ಇತ್ತೀಚೆಗೆ ನಮ್ಮ ಸಂಸ್ಕೃತಿ, ಭಾಷೆ ಶ್ರೇಷ್ಠ ಎಂಬ ವಾದಗಳು ನಡೆಯುತ್ತಿದ್ದು, ಆಯಾ ರಾಜ್ಯಗಳು ಭಾಷಾ ಅಭಿವೃದ್ಧಿಗೆ ನೀತಿ ರೂಪಿಸಿದಾಗ ಎಲ್ಲ ಭಾಷೆ, ಸಂಸ್ಕೃತಿಗೆಗಳಿಗೆ ಪ್ರಾಮುಖ್ಯತೆ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ರವಿವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರೊ.ಬರರಗೂರು ರಾಮಚಂದ್ರಪ್ಪ ಅವರು 75 ವರ್ಷ ದಾಟಿದ ಹಿನ್ನೆಲೆಯಲ್ಲಿ ನಾಡೋಜ ಪ್ರೊ.ಬರಗೂರು ಸ್ನೇಹಬಳಗ ವತಿಯಿಂದ ಆಯೋಜಿಸಿದ್ದ ‘ಸಾಂಸ್ಕೃತಿಕ ಸ್ನೇಹಗೌರವ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಷಾ ಅಭಿವೃದ್ಧಿಗೆ ಉಪಯುಕ್ತ ಯೋಜನೆಯನ್ನು ರೂಪಿಸುವ ಇಂದಿನ ತುರ್ತು ಅಗತ್ಯವಾಗಿದೆ. ದೇಶ ಅಥವಾ ರಾಜ್ಯಕ್ಕೆ ಒಂದೇ ಸಂಸ್ಕೃತಿ ಇಲ್ಲ. ಎಲ್ಲೆಡೆ ಬಹುಸಂಸ್ಕೃತಿ ಇದೆ ಎಂದು ಪ್ರತಿಪಾದಿಸಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಅವರನ್ನು ಬಂಡಾಯ ಸಾಹಿತ್ಯಕ್ಕೆ ಸೀಮಿತಗೊಳಿಸಬಾರದು. ಅವರು ಅದನ್ನು ಮೀರಿ ಬೆಳೆದವರು ಎಂದು ಅವರು ಹೇಳಿದರು.
ಪ್ರಜಾಸತ್ತಾತ್ಮಕ, ಪ್ರಗತಿಶೀಲ ವಿಚಾರಧಾರೆಯಿಂದ ಬರಗೂರು ಬಹುಸಂಸ್ಕೃತಿ ರಾಷ್ಟ್ರದ ವಕ್ತಾರರಾಗಿದ್ದಾರೆ. ನಾಡಿನ ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿರುವ ಅವರು, ಮಾನವೀಯ ಮುನ್ನಡೆಯಿಂದ ಅರ್ಥೈಸಿ ಹೇಳಿದ ಸಾಹಿತಿ. ಅವರ ಬರವಣಿಗೆ, ಚಿಂತನೆಗಳು, ವಿಚಾರ, ವಿಮರ್ಶೆ-ಪರಾಮರ್ಶೆಗಳು ಬಹುಮುಖಿಯಾಗಿವೆ ಹೊರತು ಏಕಮುಖಿಯಾಗಿಲ್ಲ. ಅವರು ವಿದ್ವತ್ ವಲಯದಲ್ಲಿನ ಯಾವುದೇ ಗುಂಪಿಗೆ ಸೇರಿಲ್ಲ. ಸಾಮಾಜಿಕ, ಸೈದ್ಧಾಂತಿಕ ಬದ್ಧತೆಯಿಂದ ನಾಡಿಗೆ ಮೇಲ್ಪಂತಿಯ ಸಾಂಸ್ಕೃತಿಕ ಬರವಣಿಗೆ ನೀಡಿದ್ದಾರೆ ಎಂದು ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಸಚಿವೆ ಶೈಲಜ ಟೀಚರ್, ಸಾಹಿತಿ ಪ್ರೊ.ಬರರಗೂರು ರಾಮಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.