×
Ad

‘ಕನಿಷ್ಟ ಕೂಲಿ’ಯ ಬಗ್ಗೆ ಮಾತನಾಡದ ರಾಜಕೀಯ ಪಕ್ಷಗಳು : ಎಸ್.ಬಾಲನ್

Update: 2024-10-19 20:54 IST

ಬೆಂಗಳೂರು : ‘ಕನಿಷ್ಠ ವೇತನ, ಕಾರ್ಮಿಕರ ಕೂಲಿಯ ಬಗ್ಗೆ ಮಾತನಾಡದ ಯಾವುದೇ ರಾಜಕೀಯ ಪಕ್ಷಗಳು ನಾಲಾಯಕ್’ ಎಂದು ಹಿರಿಯ ವಕೀಲ ಎಸ್.ಬಾಲನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ವತಿಯಿಂದ ಹಮ್ಮಿಕೊಂಡಿದ್ದ ‘ಅಭದ್ರ ಕಾರ್ಮಿಕರ ಕುರಿತು ದಕ್ಷಿಣ ಭಾರತ’ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರದಲ್ಲಿರುವ ಸರಕಾರವಾಗಲಿ, ಇನ್ನಿತರೆ ರಾಜಕೀಯ ಪಕ್ಷಗಳಾಗಲಿ ಯಾರು ಕಾರ್ಮಿಕರ ರಕ್ಷಣೆ, ಕೂಲಿ, ವೇತನದ ಬಗ್ಗೆ ಮಾತನಾಡುವುದಿಲ್ಲವೋ ಅವರು ಆಡಳಿತ ಬಿಟ್ಟು ತೊಳಗಲಿ ಎಂದು ಹೇಳಿದರು.

ಎಲ್ಲ ದೇಶಗಳಲ್ಲಿಯೂ ಕನಿಷ್ಠ ವೇತನ ನಿಗದಿ ಮಾಡಿರುತ್ತಾರೆ. ಅದೇ ರೀತಿ ಭಾರತದಲ್ಲೂ ಪ್ರಧಾನಿ ಮೋದಿ 2019ರಲ್ಲಿ 2ರೂ. ಹೆಚ್ಚಳ ಮಾಡಿ ಒಂದು ದಿನಕ್ಕೆ 178ರೂ. ನಿಗದಿ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಒಂದು ಗಂಟೆಗೆ ಅರ್ಧ ಡಾಲರ್ 8ಗಂಟೆಗೆ 4ಡಾಲರ್‌ ಗಳಷ್ಟು ಕೊಡುತ್ತಿದ್ದರೆ, ಮೋದಿ ಸರಕಾರ ದೇಶದಲ್ಲಿ 2ಡಾಲರ್ ಮಾತ್ರ ಕೂಲಿ ಕೊಡುತ್ತಿದ್ದಾರೆ ಎಂದು ಬಾಲನ್ ಬೇಸರ ವ್ಯಕ್ತಪಡಿಸಿದರು.

ಶ್ರೀಲಂಕಾದಲ್ಲಿ 7 ಡಾಲರ್, ಚೈನಾದಲ್ಲಿ ಒಂದು ಗಂಟೆಗೆ 4 ಡಾಲರ್ ರೀತಿಯಲ್ಲಿ ಒಂದು ದಿನಕ್ಕೆ 32ಡಾಲರ್, ಅಮೇರಿಕಾದಲ್ಲಿ 17ಡಾಲರ್, ಜಪಾನ್‍ನಲ್ಲಿ 24ಡಾಲರ್, ಜರ್ಮಿನಿಯಲ್ಲಿ 32ಡಾಲರ್ ಕೊಡತ್ತಾರೆ. ಆದರೆ ದೇಶದಲ್ಲಿ 2 ಡಾಲರ್ ಅಷ್ಟು ಹಣ ತೆಗೆದುಕೊಂಡು ಹೇಗೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದಕ್ಕೆ ಸಾಧ್ಯ. ಇಡಿ ಪ್ರಪಂಚದಲ್ಲಿಯೇ ಕಡಿಮೆ ಕೂಲಿ ಕೊಡುವುದು ನಮ್ಮದೇಶದ್ದಾಗಿದೆ ಎಂದು ಅವರು ಮಾಹಿತಿ ನೀಡಿದರು.

ದೇಶದಲ್ಲಿ ಕೂಲಿಯ ಬಗ್ಗೆ ಹೋರಾಟ ಆಗಲೇಬೇಕು. ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ. ತಿಂಗಳಿಗೆ 6-7ಸಾವಿರ ರೂ. ತೆಗೆದುಕೊಂಡು ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ಕೂಲಿ ಕೊಡಿಸುವ ಜವಾಬ್ದಾರಿ ಸರಕಾರದ್ದು. ಆದರೆ ಅವರು ಅದನ್ನು ಮಾಡುವುದಿಲ್ಲ. ಜಾಗತೀಕರಣ ಮತ್ತು ಮೋದಿ ಬಂದ ನಂತರದಲ್ಲಿ ಕಾರ್ಮಿಕರಿಗೆ ಶೇ.3ರಷ್ಟು ಮಾತ್ರ ಕೆಲಸದ ಭದ್ರತೆ ಇದೆ. ಈಗ ತಂದಿರುವ ಹೊಸ ಕಾರ್ಮಿಕ ಕಾನೂನುಗಳು ಜಾರಿಯಾದರೆ ಶೂನ್ಯ ರಕ್ಷಣೆ ಆಗುತ್ತದೆ ಎಂದು ಬಾಲನ್ ತಿಳಿಸಿದರು.

ಹೊಸ ಕಾರ್ಮಿಕ ಕಾನೂನುಗಳಿಂದ ವೇತನ ಸಿಗುವುದಿಲ್ಲ, ಉದ್ಯೋಗದ ಭದ್ರತೆ ಇರುವುದಿಲ್ಲ. ಒಟ್ಟಾರೆ ಇದೊಂದು ದಂಧೆಯಾಗುತ್ತದೆ. ಈ ಕಾನೂನುಗಳು ಕಾರ್ಮಿಕರಿಗೆ ಒಳಿತು ಮಾಡುವುದಿಲ್ಲ. ಈ ನಾಲ್ಕು ಕಾನೂನುಗಳು ಬಂಡವಾಳಶಾಹಿಗಳ ರಕ್ಷಣೆಗಾಗಿ ಇರುವಂತಹದ್ದು. ಇಂಡಸ್ಟ್ರೀಯಲ್ ರಿಲೇಷನ್ ಬಿಲ್ ಎಂದು ಹೇಳುತ್ತಾರೆ, ಅದು ಸುಳ್ಳು. ಬಂಡವಾಳಶಾಹಿಗಳು ಬೇಕೆಂದರೆ ಕೆಲಸದಲ್ಲಿಟ್ಟುಕೊಳ್ಳುತ್ತಾರೆ, ಬೇಡದಿದ್ದರೆ ಕೆಲಸದಿಂದ ತೆಗೆದುಹಾಕುತ್ತಾರೆ. ಈ ಕೋಡ್‍ಗಳು ದೇಶದ ಶ್ರಮಜೀವಿಗಳನ್ನು 200ವರ್ಷಗಳ ಹಿಂದಿಗೆ ತಳ್ಳುತ್ತದೆ. ಸಮಾಜ ಮುಂದೆ ಚಲಿಸುವುದರ ಬದಲಿಗೆ ಹಿಂದಕ್ಕೆ ತಳ್ಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

140 ಕಾನೂನುಗಳನ್ನು ವೇತನ ಕಾಯಿದೆ ಎಂದು ಮಾಡಿ, ನಾಲ್ಕು ಕಾನೂನುಗಳನ್ನು ಒಂದು ಕಾನೂನು ಮಾಡಿದ್ದಾರೆ. ಈ ಕಾನೂನುಗಳು ಸಂಪೂರ್ಣವಾಗಿ ಕಾರ್ಮಿಕರ ವಿರೋಧವಾಗಿವೆ. ಇದು ದೇಶ ದ್ರೋಹದ ಕಾನೂನು, ಸಂವಿಧಾನ ವಿರೋಧಿ ಕಾನೂನು. ಇಡೀ ಪ್ರಪಂಚದಲ್ಲಿ ಇಂತಹ ಅಯೋಗ್ಯ ಕಾನೂನುಗಳನ್ನು ತಂದಿರುವುದು ದೇಶದ ಬಿಜೆಪಿ ಸರಕಾರ ಮಾತ್ರ. ಕಾರ್ಮಿಕರು ಇದನ್ನು ನಿರಾಕರಿಸಬೇಕು ಎಂದು ಬಾಲನ್ ಕರೆ ನೀಡಿದರು.

ಕಾರ್ಯಗಾರದಲ್ಲಿ ಕೇರಳ ಕಾರ್ಮಿಕ ಮುಖಂಡ ಸತ್ಯನಾರಾಯಣ, ತಮಿಳುನಾಡು ಕಾರ್ಮಿಕ ಮುಖಂಡ ಸತೀಶ್, ಕಾರ್ಮಿಕ ನೀತಿ ಸಮಿತಿಯ ಅಧ್ಯಕ್ಷ ಪ್ರೊ.ಬಾಬೂ ಮ್ಯಾಥ್ಯೂ, ಶ್ರಮಿಕ ಶಕ್ತಿ ಪದಾಧಿಕಾರಿಗಳಾದ ಸುಷ್ಮಾ, ಚನ್ನಮ್ಮ, ರವಿಮೋಹನ್, ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News