×
Ad

ಯುಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ : ಡಾ.ಬಿಳಿಮಲೆ

Update: 2024-10-24 23:24 IST

ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಪ್ರಾತಿನಿಧ್ಯವನ್ನು ನೀಡುವ ಮೂಲಕ ಹಿಂದಿಯೇತರ ಅಭ್ಯರ್ಥಿಗಳ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಆದ್ದರಿಂದ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಗುರುವಾರ ಈ ಕುರಿತಂತೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕೇವಲ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿದ್ದು, ಈ ಭಾಷೆಗಳ ಮೇಲೆ ಪ್ರಭುತ್ವ ಹೊಂದದೆ ಇರುವ ಹಾಗೂ ತಮ್ಮ ತಾಯ್ನುಡಿಗಳಲ್ಲಿ ಪರೀಕ್ಷೆಯನ್ನು ಎದುರಿಸುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಭಾಷಾ ಅಭ್ಯರ್ಥಿಗಳು ಆಂಗ್ಲ ಅಥವಾ ಹಿಂದಿ ಭಾಷೆಗಳ ಪ್ರಶ್ನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಕಾರಣಕ್ಕಾಗಿ ಸಮರ್ಪಕ ಉತ್ತರ ನೀಡುವುದರಲ್ಲಿಯು ವಿಫಲರಾಗುವ ಸಾಧ್ಯತೆಗಳಿರುತ್ತವೆ. ದೇಶದ ಪ್ರತಿಯೊಬ್ಬ ನಾಗರೀಕನಿಗೆ ಸಮಾನ ಹಕ್ಕನ್ನು ನೀಡುವುದು ಸಂವಿಧಾನಾತ್ಮಕ ಆಶಯವಾಗಿರುವ ಕಾರಣ ಕೂಡಲೇ ಈ ಕುರಿತು ಕ್ರಮ ವಹಿಸಿ ಹಿಂದಿಯೇತರ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News