×
Ad

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ | ʼಲಕ್ಕುಂಡಿ: ಕಲ್ಲಿನಲ್ಲಿ ಅರಳಿದ ಶಿಲ್ಪಕಲೆʼ

Update: 2025-01-22 22:50 IST

ಹೊಸದಿಲ್ಲಿ: ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು’ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ರಾಜಧಾನಿಯ ಕರ್ತವ್ಯಪಥದಲ್ಲಿ ಇದೇ ಜ.26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ ಎಂದು ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದರು.

ಬುಧವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ಹೇಳಿದರು.

ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ, ಎಲ್ಲ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟ್ಟಣವಾದ ಗದಗದ ಲಕ್ಕುಂಡಿಯು ಒಂದಾಗಿದೆ. ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ ಎಂದು ಅವರು ತಿಳಿಸಿದರು.

ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ರಾಜ್ಯವು ಪ್ರಸ್ತುತ ಪಡಿಸುತ್ತಿರುವ ಈ ಸ್ತಬ್ಧಚಿತ್ರವು ಇದೇ ಜ.26ರಂದು ಎಲ್ಲರ ಮನಸೂರೆಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಮಂತ್ ನಿಂಬಾಳ್ಕರ್ ಹೇಳಿದರು.

ದಿಲ್ಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರಕಾರದ ರಕ್ಷಣಾ ಇಲಾಖೆಯಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲ ಹಂತಗಳಲ್ಲೂ ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ’ಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 15 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಅವರು ಹೇಳಿದರು.

ಪಥ ಸಂಚಲನದಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಕ್ಕಾಗಿ ವಾರ್ತಾ ಇಲಾಖೆಯು ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು, ಮೆಕ್ಕೆಕಟ್ಟು : ಮರಕೆತ್ತನೆಯ ದೈವ ನಿಧಿ, ಕರ್ನಾಟಕದ ಸಮೃದ್ದಿಯ ಆಚರಣೆಗಳು ಹಾಗೂ ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು’ ಎಂಬ ವಿಷಯವನ್ನು ಪರಿಣಿತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು ಎಂದು ಹೇಮಂತ್ ನಿಂಬಾಳ್ಕರ್ ಮಾಹಿತಿ ನೀಡಿದರು.

ವಿಷಯ ಆಯ್ಕೆಯ ಬಳಿಕ ಲಕ್ಕುಂಡಿಯ ಶಿಲ್ಪಕಲೆಯ ವೈಭವವನ್ನು ಅದರ ಪ್ರತಿರೂಪದಂತೆ ಕೆತ್ತುವ ಬೃಹತ್ ಸವಾಲು ಎದುರಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮೆ ಹಾಗೂ ಸಂಸ್ಜೃತಿಯ ಮಹತ್ವವನ್ನು ಎತ್ತಿಹಿಡಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದಿತ್ತು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಮಾರ್ಗದರ್ಶನ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರ ಸಲಹೆ, ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮವಾಗಿಸಿತ್ತು ಎಂದು ಅವರು ಹೇಳಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಶರಣು ಗೋಗೇರಿ ಒದಗಿಸಿದ ಛಾಯಾಚಿತ್ರಗಳು ಮತ್ತು ಮಾಹಿತಿ ಸೇರಿದಂತೆ ವಿಷಯ ಪರಿಣಿತರು, ತಜ್ಞರು, ಕಲಾ ನಿರ್ದೇಶಕರು ಮತ್ತು ಕಲಾವಿದರೊಂದಿಗೆ ಪರಾಮರ್ಶಿಸಿಕೊಂಡು ಇಲಾಖೆಯು ಈ ಕೆಲಸವನ್ನು ಕೈಗೆತ್ತಿಕೊಂಡಿತ್ತು. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿ ಬಂದಿದೆ ಎಂದು ಹೇಮಂತ್ ನಿಂಬಾಳ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News