×
Ad

ಎಸ್ಸಿಎಸ್‍ಪಿ, ಟಿಎಸ್‍ಪಿ ಕುರಿತು ವಿಶೇಷ ಅಧಿವೇಶನ ನಡೆಸಲು ಒತ್ತಾಯಿಸಿ ಧರಣಿ

Update: 2025-01-22 22:53 IST

ಬೆಂಗಳೂರು : ಭೂ ಒಡೆತನ-ನೀರು (ಗಂಗಾ ಕಲ್ಯಾಣ) ಹಾಗೂ ಉದ್ಯೋಗದ ಆದ್ಯತಾ ವಲಯವನ್ನು ಗುರುತಿಸಿ, ದಲಿತ ಸಮಯದಾಯಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು. ಎಸ್ಸಿಎಸ್‍ಪಿ, ಟಿಎಸ್‍ಪಿ ಅನುದಾನ ಬಳಕೆಯ ಕುರಿತು ವಿಶೇಷ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.

ಭೂಮಿ (ಭೂ ಒಡೆತನ)-ನೀರು (ಗಂಗಾ ಕಲ್ಯಾಣ)-ಉದ್ಯೋಗದ ಸೇರಿದಂತೆ ಆದ್ಯತಾ ವಲಯಗಳನ್ನು ಗುರುತಿಸಿ, ಅರ್ಜಿ ಹಾಕಿರುವ ಎಲ್ಲರಿಗೂ ರಾಜ್ಯ ಸರಕಾರದ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು. ಬಗರ್ ಹುಕ್ಕುಂ ಉಳುಮೆದಾರರಿಗೆ ಸಾಗುವಳಿ ಪತ್ರ ನೀಡಬೇಕು. ಭೂ ಸುಧಾರಣೆ ಮೂಲಕ ಭೂಮಿ ಇಲ್ಲದವರಿಗೆ 5 ಎಕರೆ ಭೂಮಿ ಹಂಚಿಕೆ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಎಸ್‍ಸ್ಸಿ, ಎಸ್.ಟಿ ನಿಗಮಗಳಲ್ಲಿ ಅನುದಾನ ದುರುಪಯೋಗ, ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಯೋಜನೆಗಳು ಒಂದೇ ಇಲಾಖೆ ವ್ಯಾಪ್ತಿಗೆ ತಂದು, ಏಕಗಾವಕ್ಷಿ ಮೂಲಕ ಜಾರಿಯಾಗಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಂಚಾಯತ್ ಗ್ರಾಮ, ವಾರ್ಡ್ ಸಭೆಗಳಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಗೋಪಲಕೃಷ್ಣ ಹರಳಹಳ್ಳಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜನಗಣತಿ ಮಾಡಿ ಜೇಷ್ಠತೆ ಮತ್ತು ತೀವ್ರ ಬಡತನದ ಆಧಾರದಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಗುರತಿಸಬೇಕು. ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತಕ್ಷಣ ಬರ್ತಿ ಮಾಡಬೇಕು ಪ್ರತಿ ನಿರುದ್ಯೋಗಿ ದಲಿತ ಯುವಜನರಿಗೆ 10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ಖಾಸಗೀ ಕ್ಷೇತ್ರದಲ್ಲೂ ಮಿಸಾಲಾತಿ ಸೌಲಭ್ಯ ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು. ಈ ಕುರಿತು ವಿಶೇಷ ಜಿಲ್ಲಾ ತ್ವರಿತ ನ್ಯಾಯಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ಪ್ರದಾನ ಕಾರ್ಯದರ್ಶಿ ಎನ್.ರಾಜಣ್ಣ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಅಧ್ಯಕ್ಷ ಯು.ಬಸವರಾಜು, ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಹುಲಿಗೆಮ್ಮ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News