ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಗೆ ಕನಿಷ್ಠ ವೇತನ : ಸ್ವತಂತ್ರ ಸಂಘಟನೆ ಮನವಿ
ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ 25 ಸಾವಿರ ರೂ. ಹಾಗೂ ಸಹಾಯಕರಿಗೆ 12 ಸಾವಿರ ರೂ. ಕನಿಷ್ಠ ವೇತನವನ್ನು ನೀಡಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘಟನೆಯ ನಿಯೋಗವು, ಅಂಗನವಾಡಿ ಕಾರ್ಯಕರ್ತೆಯರನ್ನು ‘ಸಿ’ ದರ್ಜೆ ಮತ್ತು ಸಹಾಯಕಿಯರನ್ನು ‘ಡಿ’ ದರ್ಜೆ ಸರಕಾರಿ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮ್ಮ ರಾಜ್ಯದಲ್ಲಿಯೂ ಜಾರಿ ಮಾಡಿ, ಸರಕಾರಿ ನೌಕಕರೆಂದು ಪರಿಗಣಿಸಬೇಕು ಎಂದು ಕೋರಿತು.
ನಿಯೋಗ ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷೆ ಪ್ರೇಮಾ, ಗೌರವ ಅಧ್ಯಕ್ಷೆ ಜಯಲಕ್ಷ್ಮೀ, ಕಾರ್ಯದರ್ಶಿ ಉಮಾಮಣಿ, ಖಜಾಂಚಿ ವಿಶಾಲಾಕ್ಷ್ಮಿ, ಉಪಾಧ್ಯಕ್ಷೆ ನಿರ್ಮಲಾ, ಸಹ ಕಾರ್ಯದರ್ಶಿ ಶಾಂತಾ ಹಾಗೂ ಸಲಹೆಗಾರರಾದ ಭಾರತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.