ಬೆಂಗಳೂರು | ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಗೆ ಕನಿಷ್ಠ ವೇತನ ನೀಡಲು ಆಗ್ರಹಿಸಿ ಧರಣಿ
ಬೆಂಗಳೂರು: ರಾಜ್ಯದ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರಿಗೆ ಕನಿಷ್ಟ ವೇತನ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಈ ಬಜೆಟ್‍ನಲ್ಲಿ ಅಡುಗೆ ಸಿಬ್ಬಂದಿಯ ಗೌರವ ಧನವನ್ನು 6 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂಪಾರ್ಕ್‍ನಲ್ಲಿ ಕರ್ನಾಟಕ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘಟನೆ ಯಿಂದ ಪ್ರತಿಭಟನೆ ನಡೆಸಲಾಯಿತು.
ಅಕ್ಷರ ದಾಸೋಹ ಕಾರ್ಮಿಕರಿಗೆ ಕನಿಷ್ಠ ವೇತನ, ಇಪಿಎಫ್, ಇಎಸ್‍ಐ ಸೌಲಭ್ಯಗಳನ್ನು ನೀಡಬೇಕು. ನಿವೃತ್ತಿ ಪರಿಹಾರವಾಗಿ ಕನಿಷ್ಠ 2 ಲಕ್ಷ ರೂ. ಇಡಿಗಂಟನ್ನು ನೀಡಬೇಕು. ಸಮವಸ್ತ್ರ, ಕೈಗವಸುಗಳನ್ನು ನೀಡಬೇಕು. 2024ರಲ್ಲಿ ಬರಗಾಲ ಎಂದು ಘೋಷಿಸಿ ಎಪ್ರಿಲ್- ಮೇನಲ್ಲಿ ಕೆಲಸಮಾಡಿಸಿ ಕೊಂಡ ಎರಡು ತಿಂಗಳುಗಳ ಸಂಬಳ ನೀಡಬೇಕು ಎಂದು ಕೂಡಾ ಧರಣಿನಿರತರು ಒತ್ತಾಯಿಸಿದರು.
ಕಾರ್ಮಿಕ ಹೋರಾಟಗಾರ ಕೆ.ವಿ ಭಟ್ ಮಾತನಾಡಿ ಕೇವಲ 3600/- ರೂ. ನಲ್ಲಿ ಜೀವನಮಾಡುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬೆಳಿಗ್ಗೆ ಇಂದ ಸಂಜೆವರೆಗೂ ಕೆಲಸ ನಿರ್ವಹಿಸುವ ಈ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಿ ಈ ಕುಟುಂಬಗಳಿಗೆ ಭದ್ರತೆ ನೀಡಬೇಕು ಎಂದರು.
ಧರಣಿಯಲ್ಲಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ, ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ ಎಸ್. ಡಬ್ಲ್ಯೂಎಫ್‍ಐ) ಅಖಿಲ ಭಾರತ ಅಧ್ಯಕ್ಷೆ ರಮಾ ಟಿ.ಸಿ, ರಾಜ್ಯ ಕಾರ್ಯದರ್ಶಿ ಸಂದ್ಯಾ ಪಿ.ಎಸ್, ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮತ್ತಿತರರು ಹಾಜರಿದ್ದರು.
ಇದೇ ವೇಳೆ ಪಿ.ಎಂ ಪೋಷಣ್ ನಿರ್ದೇಶಕ ಸದಾಶಿವ ಪ್ರಭು, ಶಾಲಾ ಶಿಕ್ಷಣ ಇಲಾಖೆಯ ಮದ್ಯಾಹ್ನ ಬಿಸಿ ಯೂಟದ ಜಂಟಿ ನಿರ್ದೇಶಕ ಹಸನ್ ಮೋಹಿದ್ದೀನ್ ಸಹಾಯಕ ನಿರ್ದೇಶಕ ಎನ್. ಮಂಜುನಾಥ ಮನವಿ ಸ್ವೀಕರಿಸಿದರು.