×
Ad

ಅನ್ವರ್‌ ಬಾಷ ಅವರ ವಕ್ಫ್ ಮಂಡಳಿ ಸದಸ್ಯತ್ವ ರದ್ದುಪಡಿಸಲು ಅಜ್ಮಲ್ ಅಹಮದ್ ಆಗ್ರಹ

Update: 2025-02-22 22:17 IST

ಬೆಂಗಳೂರು : ರಾಜ್ಯ ವಕ್ಫ್ ಮಂಡಳಿಯ ಮುತವಲ್ಲಿ ಚುನಾವಣೆಯಲ್ಲಿ ಅಕ್ರಮ, ಅಧಿಕಾರ ದುರ್ಬಳಕೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್ ಬಾಷ ವಿರುದ್ಧ ತನಿಖೆ ಮಾಡಿ, ಅವರ ಸದಸ್ಯತ್ವವನ್ನು ರದ್ದು ಪಡಿಸಬೇಕು ಎಂದು ರಾಜ್ಯ ಮುಸ್ಲಿಮ್ ಯುವ ವೇದಿಕೆ ಅಧ್ಯಕ್ಷ ಅಜ್ಮಲ್ ಅಹಮದ್ ಆಗ್ರಹಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ವರ್ ಬಾಷ ಚಿತ್ರದುರ್ಗ ಜಿಲ್ಲೆಯ ಅಗಸನಕಲ್ಲು ಬಡಾವಣೆಯ ಖಬರಸ್ಥಾನ್‍ನ ಜಮೀನನ್ನು ಕಬಳಿಸಿಕೊಂಡು ತಮ್ಮ ಸ್ವಂತ ಸಂಸ್ಥೆ ‘ರಮೀಝಾ ಮೈನಾರಿಟಿ ವೆಲ್ಫೇರ್ ಟ್ರಸ್ಟ್’ ವತಿಯಿಂದ ಬೃಹತ್ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಈ ಅಕ್ರಮಗಳಲ್ಲಿ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 32 ಸಾವಿರ ವಕ್ಫ್‌ ಗೆ ಸೇರಿದ ನೋಂದಾಯಿತ ಸಂಸ್ಥೆಗಳಿದ್ದು, ಈ ನೋಂದಾಯಿತ ಸಂಸ್ಥೆಗಳ ಮುತವಲ್ಲಿಗಳು ಮತದಾನ ಮಾಡುವ ಮೂಲಕ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಸದಸ್ಯರನ್ನು ಆಯ್ಕೆ ಮಾಡಲು 1,024 ಸಂಸ್ಥೆಗಳ ಮುತವಲ್ಲಿಗಳು ಹಕ್ಕು ಉಳ್ಳವರಾಗಿದ್ದಾರೆ. ಬಾಕಿ ಉಳಿದ 31 ಸಾವಿರ ಸಂಸ್ಥೆಗಳ ಸದಸ್ಯರಿಗೆ ಅವಕಾಶ ಇಲ್ಲದೇ ಇರುವುದು ಸಂಶಯಾಸ್ಪದವಾಗಿದೆ ಎಂದು ಅಜ್ಮಲ್ ಅಹಮದ್ ಹೇಳಿದರು.

ರಾಜ್ಯ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನವನ್ನು ಅನ್ವರ್ ಭಾಷ ಸ್ವಂತ ಶಾಲಾ, ಕಾಲೇಜು, ಮನೆಗೆ ಸಂಪರ್ಕ ಕಲ್ಪಿಸಿಕೊಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಬಡಾವಣೆಯ ಅಭಿವೃದ್ಧಿಗಾಗಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ವಕ್ಫ್ ಸಚಿವರ ಆಪ್ತರಿಗೆ ಸೇರಿದ ಎನ್‍ಜಿಒ ಸಂಸ್ಥೆಗೆ ನೂರಾರು ಕೋಟಿ ರೂ. ಹಣ ಬಿಡುಗಡೆ ಮಾಡಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪ ಮಾಡಿದರು.

ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ, ತನಿಖೆ ನಡೆಸಬೇಕು ಮತ್ತು ಅಧಿಕಾರ ದರ್ಬಳಕೆ ಮಾಡಿಕೊಂಡು ಅಕ್ರಮವೆಸಗಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಜ್ಮಲ್ ಅಹಮದ್ ಆಗ್ರಹಿಸಿದರು.

ಕರ್ನಾಟಕ ಸಮಾಜ ಸೇವಾ ಸಂಘದ ರಾಜ್ಯದ್ಯಕ್ಷ ಮುಹಮ್ಮದ್ ಸೈಫುಲ್ಲಾ, ಪದಾಧಿಕಾರಿಗಳಾದ ಮನ್ಸೂರ್, ದಾದಾಪೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News