×
Ad

ಶಾಸಕರು ಪುಸ್ತಕ ಖರೀದಿಸಿ, ಕ್ಷೇತ್ರಗಳಿಗೆ ಪೂರೈಸಲಿ : ಯು.ಟಿ.ಖಾದರ್

Update: 2025-02-27 22:12 IST

ಬೆಂಗಳೂರು : ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿರುವ ಪುಸ್ತಕ ಮೇಳದಲ್ಲಿ ಶಾಸಕರು ತಮ್ಮ ನಿಧಿಯಿಂದ 2 ಲಕ್ಷ ರೂ.ಗಳ ವರೆಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಗಳಿಗೆ ಪೂರೈಸಲು ಅವಕಾಶವಿದ್ದು, ಇದನ್ನು ಸದು ಪಯೋಗಪಡಿಸಿಕೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ವತಿಯಿಂದ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇಂದಿನಿಂದ ಮಾ.3ರವರೆಗೆ ಹಮ್ಮಿಕೊಂಡಿರುವ ಪುಸ್ತಕ ಮೇಳ ಉದ್ಘಾಟಿಸಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಪುಸ್ತಕ ಖರೀದಿದಾರರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯಲಿದೆ ಎಂದರು.

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದ್ದೇವೆ. ಸರ್ವರಿಗೂ ಇರುವ ವಿಧಾನಸೌಧದಲ್ಲಿ ಪುಸ್ತಕ ಪ್ರಕಾಶಕರನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಿದ್ದೇವೆ. ರಾಜ್ಯದಲ್ಲಿ ಸಾಹಿತ್ಯಕ್ಕೆ ಕೊಡುಗೆ ಕೊಡುವವರು ಪ್ರಕಾಶಕರು ಆಗಿದ್ದಾರೆ. ಪ್ರಕಾಶಕರಿಂದ ಸಾಹಿತ್ಯ ಜನರಿಗೆ ತಲುಪಲಿದೆ. ಈ ಪುಸ್ತಕ ಮೇಳದ ಕೊನೆಯ ದಿನವಾದ ಮಾ.3ರಂದು ಮಾತ್ರ ಅಧಿವೇಶನ ಇರುವ ಕಾರಣ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದಿನಿಂದ ಆರಂಭವಾಗಿರುವ ಈ ಮೇಳ ಮಾ.3ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.2ರ ಸಂಜೆ ನಟ, ನಿರ್ದೇಶಕ ಸಾಧುಕೋಕಿಲ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿದ್ದು, ಪ್ರತಿದಿನ ಕವಿಗೋಷ್ಠಿಗಳು ನಡೆಯಲಿವೆ.ಅದೇ ರೀತಿ, ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದರು.

ಶುಕ್ರವಾರ(ಫೆ.28) ಬೆಳಗ್ಗೆ 11ಕ್ಕೆ ‘ದ್ಯಶ್ಯ ಮತ್ತು ಮುದ್ರಣ ಮಾಧ್ಯಮಗಳ ಜವಾಬ್ದಾರಿ’ ವಿಷಯ ಕುರಿತು ಪತ್ರಕರ್ತರಾದ ರವೀಂದ್ರ ಭಟ್, ಪ್ರಮೋದ್ ಶಾಸ್ತ್ರಿ, ಹರಿಪ್ರಸಾದ್ ಅವರಿಂದ ಸಂವಾದ ಹಾಗೂ ವಿಶ್ವೇಶ್ವರ ಭಟ್, ಸಾವಣ್ಣ ಪ್ರಕಾಶನದ ಪ್ರಕಾಶಕ ಕರೀಂ ಹಾಗೂ ಆಕೃತಿ ಪುಸ್ತಕ ಸಂಸ್ಥೆಯ ಬಿ.ಎಂ.ಗುರುಪ್ರಸಾದ್ ಅವರು ‘ಸಮಕಾಲೀನ ಪ್ರಕಾಶನ ಕ್ಷೇತ್ರದ ಸವಾಲುಗಳು’ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಕ್ಯಾಪ್ಟನ್ ಗೋಪಿನಾಥ್, ಬಡಗಲಪುರ ನಾಗೇಂದ್ರ, ಚಿದಾನಂದ ಪಟೇಲ್ ಅವರಿಂದ ‘ನಾಯಕತ್ವ ಇಂದು ಮತ್ತು ನಾಳೆ’ ಕುರಿತು ಹಾಗೂ ಕೃಷಿ ಸಂಶೋಧಕರಾದ ಕೆ.ಎನ್.ಗಣೇಶಯ್ಯ, ಶ್ರೀಮತಿ ಹರಿಪ್ರಸಾದ್, ಕಿರಣ್‍ಕುಮಾರ್ ಅವರಿಂದ ‘ನೆಲದ ಮೂಲದಿಂದ ಅಂತರಿಕ್ಷದ ವರೆಗೆ’ ಕುರಿತು ಸಂವಾದ ನಡೆಯಲಿದೆ ಎಂದು ಹೇಳಿದರು.

ಮಾ.1ರ ಬೆಳಗ್ಗೆ 11ಕ್ಕೆ ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಲಿಕರ್, ಶಿವಾನಂದ ಕಳವೆ ಅವರಿಂದ ‘ಪರಿಸರ ಅಳಿವು-ಉಳಿವು’ ಕುರಿತು ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್, ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ, ಶಶಿಕಲ ಗುರುಪುರ್ ಅವರಿಂದ ‘ಸಂವಿಧಾನ ಹಿರಿಮೆ ಗರಿಮೆ ಹಾಗೂ ಅರಿವು’ ಕುರಿತು ಸಂವಾದ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಜೋಸೆಫ್ ಹೂವಾರ್ ಮಾಲತಿ ಹೊಳ್ಳ, ಪೊನ್ನಪ್ಪ, ಅರ್ಜುನ್ ದೇವಯ್ಯ, ಚಂದ್ರಮೌಳಿ ಕಣವಿ ಅವರಿಂದ ‘ಕ್ರೀಡೆ ಮತ್ತು ಸಾಹಿತ್ಯ’ ಕುರಿತು ಹಾಗೂ ಡಾ.ಅನಂತಪ್ರಭು, ಡಾ.ಪ್ರಣಬ್ ಮೊಹಾಂತಿ, ಡಾ.ರಮೇಶ್ ನಿಂಬೆಮರದಳ್ಳಿ ಅವರಿಂದ ‘ಕೃತಕ ಬುದ್ದಿಮತ್ತೆ/ಸೈಬರ್ ಸೆಕ್ಯುರಿಟಿ’ ಕುರಿತು ಸಂವಾದ ನಡೆಯಲಿದೆ ಎಂದು ಅವರು ವಿವರಿಸಿದರು.

ಮಾ.2ರ ಬೆಳಗ್ಗೆ 11ಕ್ಕೆ ಬಾನು ಮುಷ್ತಾಕ್, ಡಾ.ಮಹೇಶ್ ಜೋಶಿ, ಡಾ.ಡಿ.ಡೊಮಿನಿಕ್ ಅವರಿಂದ ‘ಕನ್ನಡ ಸಾಹಿತ್ಯದಲ್ಲಿ ಸರ್ವಸಮಭಾವದ ಚಿಂತನೆಗಳು’ ಕುರಿತು ಹಾಗೂ ಉದಯಗಾಂವ್ಕರ್‌, ಪ್ರೊ.ಬಿಳಿಗೆರೆ ಕೃಷ್ಣಮೂರ್ತಿ, ಲಲಿತಾ ಹೊಸಪೇಟಿ ಅವರಿಂದ ‘ಮಕ್ಕಳ ಸಾಹಿತ್ಯ’ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಮಾ.2ರ ಮಧ್ಯಾಹ್ನ 1ರಿಂದ 2.30 ಗಂಟೆಯ ವರೆಗೆ ಡಾ.ಮಹಾಂತೇಶ್ ರಾಮಣ್ಣವರ್, ಡಾ.ಆಶಿಶ್ ಸೀತನಾಡಿ, ಡಾ.ಸುನೀತಾರಾವ್ ಅವರಿಂದ ‘ಅಂಗಾಂಗ ದಾನದ ಅರಿವು’ ಕುರಿತು ಹಾಗೂ ಮಧ್ಯಾಹ್ನ 3 ಗಂಟೆಗೆ ಸಾಹಿತಿ ಡಾ.ದೊಡ್ಡರಂಗೇಗೌಡ, ಟಿ.ಎನ್.ಸೀತಾರಾಮ್, ಪ್ರೊ.ಎನ್.ಎಸ್.ಶ್ರೀಧರಮೂರ್ತಿ, ಪಿ.ಶೇಷಾದ್ರಿ, ಅವರಿಂದ ‘ಸಾಹಿತ್ಯ ಮತ್ತು ಚಲನಚಿತ್ರ’ ಕುರಿತು ನರಹಳ್ಳಿ ಬಾಲಸುಬ್ರಮಣ್ಯಂ, ಎಚ್.ಎಲ್.ಪುಷ್ಪ, ಡಾ.ಸಿದ್ದನಗೌಡ ಪಾಟೀಲ್ ಅವರಿಂದ ‘ಓದಿನ ಸುಖ’ ಕುರಿತು ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.

ರಾಜ್ಯ ಸರಕಾರ ಪುಸ್ತಕ ಖರೀದಿಸಲಿ: ‘ಹಲವು ದಿನಗಳಿಂದ ಮುದ್ರಣಗೊಂಡಿರುವ ಅನೇಕ ಪುಸ್ತಕಗಳನ್ನು ರಾಜ್ಯ ಸರಕಾರ ಖರೀದಿ ಮಾಡುತ್ತಿಲ್ಲ.ಇದರಿಂದ ಕನ್ನಡದ ಪ್ರಕಾಶಕರು ಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ರಾಜ್ಯ ಸರಕಾರ ದಯವಿಟ್ಟು ಮನಸ್ಸು ಮಾಡಿ ಗ್ರಂಥಾಲಯಗಳಿಗೆ ಆದೇಶ ಕೊಟ್ಟು ಪುಸ್ತಕ ಖರೀದಿಸಲು ಹೇಳಬೇಕು’

-ಬೋಳವಾರು ಮುಹಮ್ಮದ್ ಕುಂಞ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News