ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ‘ಮಹಿಳಾ ಚೈತನ್ಯ ದಿನ’
ಬೆಂಗಳೂರು : ‘ಒಂದು ದಶಕಕ್ಕೂ ಅಧಿಕ ಕಾಲದಿಂದ ಮಹಿಳಾ ದೌರ್ಜನ್ಯ ವಿರೋಧಿಸಿ ರಾಜ್ಯದಾದ್ಯಂತ ಜನಪರ ಹೋರಾಟದಲ್ಲಿ ಸಹಭಾಗಿತ್ವ ನೀಡುತ್ತ ಬಂದಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.7ರಿಂದ ಎರಡು ದಿನಗಳ ಕಾಲ ಹೊಸಪೇಟೆಯಲ್ಲಿ ‘ಮಹಿಳಾ ಚೈತನ್ಯ ದಿನ’ ನಡೆಯಲಿದೆ’ ಎಂದು ಒಕ್ಕೂಟದ ಸದಸ್ಯೆ ಆಶಾಲತಾ ಬೇಕಲ್ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಸಮತೆಯೆಡೆಗೆ ನಮ್ಮ ನಡಿಗೆ, ಸಹಬಾಳ್ವೆ ಸಮಬಾಳ್ವೆ; ಕೂಡಿ ಕಟ್ಟುವ ನ್ಯಾಯದ ಜಗವ’ ಎಂಬುದು ಇಡೀ ಕಾರ್ಯಕ್ರಮದ ಧ್ಯೇಯವಾಕ್ಯದೊಂದಿಗೆ ಎರಡು ವಿಚಾರ ಗೋಷ್ಠಿಗಳು, ಕವಿಗೋಷ್ಠಿ, ಹಕ್ಕೊತ್ತಾಯ ಜಾಥಾ ಮತ್ತು ಸಾರ್ವಜನಿಕ ಸಮಾವೇಶ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.
2012ರಲ್ಲಿ ಮಂಗಳೂರಿನಲ್ಲಿ ನಡೆದ ಹೋಂ ಸ್ಟೇ ಮೇಲಿನ ದಾಳಿ, ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 2013ರಲ್ಲಿ ‘ಇನ್ನು ಸಾಕು’ ಎಂಬ ಘೋಷವಾಕ್ಯದಲ್ಲಿ ಸಾರ್ವಜನಿಕ ಸಮಾವೇಶ ನಡೆದಿತ್ತು. ಬಳಿಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರಚನೆಯಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿ ವರ್ಷ ಸಮಾವೇಶಗಳು ನಡೆಯುತ್ತಿದ್ದು, ಕಳೆದ ಬಾರಿ ಉಡುಪಿಯಲ್ಲಿ ನಡೆದಿತ್ತು. ಇದೀಗ 13ನೆ ಸಮಾವೇಶ ಹೊಸಪೇಟೆಯಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಸಮಾವೇಶದ ಅಂಗವಾಗಿ ಕಳೆದ ಆರು ತಿಂಗಳಿನಿಂದ ಶಾಲಾ, ಕಾಲೇಜುಗಳು, ಹಾಸ್ಟೆಲ್‍ಗಳಲ್ಲಿ ‘ಅರಿವಿನ ಪಯಣ’ ಎಂಬ ಲಿಂಗಸೂಕ್ಷ್ಮತೆ ಬೆಳೆಸುವ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಹಿಂಸೆಯನ್ನು ವಿರೋಧಿಸುವ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಎಂಬ ಮೌನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಸಮಾನ ಮನಸ್ಕರನ್ನು ಒಂದುಗೂಡಿಸುವ ಸಂಕೇತವಾಗಿ ಕೌದಿ ಹೊಲಿಗೆಯ ಶಾಲನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾ.7ರಂದು ಬೆಳಗ್ಗೆ 9.30ರಿಂದ ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದ ಹರಪನಹಳ್ಳಿ ಭೀಮವ್ವ ವೇದಿಕೆಯಲ್ಲಿ ‘ಮಹಿಳಾ ಘನತೆ–ಬಹು ಆಯಾಮಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಗಣಿಗಾರಿಕೆ ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್‍ನ ಭಾನುಮತಿ ಕಲ್ಲೂರಿ ದಿಕ್ಸೂಚಿ ಭಾಷಣ ಮಾಡುವರು. ಸಂಜೆ 6ರಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ‘ಸರ್ವ ಜನಾಂಗದ ಶಾಂತಿಯ ದೇಶ’ ಎಂಬ ಘೋಷವಾಕ್ಯದೊಡನೆ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಅದೇ ರೀತಿ, ಮಾ.8ರಂದು ಬೆಳಿಗ್ಗೆ 10ಕ್ಕೆ ಬಳ್ಳಾರಿ ರಸ್ತೆಯ ಪಟೇಲ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಹಕ್ಕೊತ್ತಾಯ ಜಾಥಾ ನಡೆಯಲಿದೆ. ಬಳಿಕ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲವನ್ನು ಕಟ್ಟಿ ಮುನ್ನಡೆಸುತ್ತಿರುವ ಗುಜರಾತ್‍ನ ಝಾಕಿಯಾ ಸೋಮನ್ ಉದ್ಘಾಟಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ಈ ಬಾರಿಯ ಸಮಾವೇಶದಲ್ಲಿ ಸಮಾನ ಮನಸ್ಕರನ್ನು ಒಂದುಗೂಡಿಸುವ ಸಂಕೇತವಾಗಿ ಕೌದಿ ಹೊಲಿಗೆಯ ಶಾಲನ್ನು ನೀಡಲಾಗುತ್ತದೆ.ಜತೆಗೆ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ’
-ಅಸ್ಮಾ ಬಳ್ಳಾರಿ, ಚಿಂತಕಿ, ಒಕ್ಕೂಟದ ಸದಸ್ಯೆ