ಸ್ವಾಭಿಮಾನಕ್ಕೆ ಧಕ್ಕೆಯಾದರೆ ಮಹಿಳೆ ಹೋರಾಟ ಅನಿವಾರ್ಯ : ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಮಹಿಳೆ ಸ್ವಾಭಿಮಾನದ ಪ್ರತೀಕವಾಗಿದ್ದು, ಆಕೆಯ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟ ನಡೆಸಬೇಕಾಗುವುದು ಅನಿವಾರ್ಯ ಎಂದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮತ್ತು ಸ್ತ್ರೀಶಕ್ತಿ ಗುಂಪು, ಒಕ್ಕೂಟಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಕುಟುಂಬ ಸಮಾಜ ಅಥವಾ ಯಾವುದೇ ಕ್ಷೇತ್ರದಲ್ಲೂ, ಸಮರ್ಥವಾಗಿ ನಿಭಾಯಿಸದೆ ಹಿಂದೆ ಸರಿದ ಉದಾಹರಣೆಗಳಿಲ್ಲ. ಮಹಿಳೆಗೆ ತನ್ನದೇ ಆದ ಜವಾಬ್ದಾರಿ ಇದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಪುರುಷರಿಗಿಂತ ಜವಾಬ್ದಾರಿ ಹೆಚ್ಚು. ಮನೆಯ ಒಳಗೆ ಮತ್ತು ಹೊರಗೂ ತನ್ನದೇ ಆದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುವ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಇಂದು ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿ ಹೆಣ್ಣು ಮಗಳ ಜೀವನದ ಹಿಂದೆ ತನ್ನದೇ ಆದ ಕತÉಗಳಿವೆ. ತಳಮಟ್ಟದಿಂದ ಮೇಲೆ ಬಂದು ಸಮಾಜದ ಎಲ್ಲ್ಲ ಸ್ತರಗಳಲ್ಲಿ ಮಹಿಳೆಯರು ಬೆಳೆದಿದ್ದಾರೆ. ಗುರಿ ಇಲ್ಲದ ಜೀವನ ಮಹಿಳೆಗೆ ಸಾಧ್ಯವಿಲ್ಲ, ಬದಲಾಗಿ ಗುರಿ ಮುಂದಿಟ್ಟುಕೊಂಡೆ ಮುಂದೆ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಿಳೆಯರ ಪ್ರತೀಕವಾಗಿ ನಮ್ಮ ಮುಂದಿದ್ದಾರೆ. ಒಂದೆಡೆ ಅಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರೂ ಜೀವನದುದ್ದಕ್ಕೂ ಸಮಾಜಕ್ಕಾಗಿ ಕಳೆದರು. ಅವರು ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಹಾಗೆಯೇ ಕಿತ್ತೂರು ರಾಣಿ ಚನ್ನಮ್ಮ ನಮ್ಮ ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದು ಅವರು ನುಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವಾರು ಯೋಜನೆಗಳನ್ನು ತಂದಿದೆ. ರಾಜ್ಯದ 37 ಲಕ್ಷ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, 15 ಲಕ್ಷ ಬಾಣಂತಿಯರ ಆರೈಕೆ ಮಾಡುತ್ತಿದೆ. ದುರ್ಬಲ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನವನ್ನು ಬಜೆಟ್‍ನಲ್ಲಿ ಹೆಚ್ಚಳ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವ ಇರಾದೆ ಹೊಂದಲಾಗಿದೆ ಎಂದೂ ಅವರು ಉಲ್ಲೇಖಿಸಿದರು.
ಸಮಾರಂಭದಲ್ಲಿ ಶಾಸಕ ಉದಯ್ ಗರುಡಾಚಾರ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್ ಸೇರಿದಂತೆ ಪ್ರಮುಖರಿದ್ದರು.