×
Ad

ಒಪ್ಪೊತ್ತಿನ ಊಟಕ್ಕಿಂತಲೂ ಮೆಟ್ರೋ ಪ್ರಯಾಣ ದರ ದುಬಾರಿ: ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ

Update: 2025-03-09 23:52 IST

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೆ ಮೆಟ್ರೋ ದರ ಏರಿಕೆ ಒಪ್ಪೊತ್ತಿನ ಊಟಕ್ಕಿಂತಲೂ ದುಬಾರಿಯಾಗಿದೆ ಎಂಬ ಆಘಾತಕಾರಿ ಅಂಶ ‘ಗ್ರೀನ್‍ಪೀಸ್’ ಸಂಘಟನೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ರವಿವಾರ ನಮ್ಮ ಮೆಟ್ರೋದ ಪ್ರಯಾಣ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ, ಪ್ರಯಾಣಿಕರು ಮತ್ತು ಬೆಂಗಳೂರಿನ ನಾಗರಿಕರು ನಮ್ಮ ಮೆಟ್ರೋದ ಭೋಗಿಯೊಳಗೆ ಮೌನ ಪ್ರತಿಭಟನೆ ನಡೆಸಿದರು. ಪ್ರಯಾಣ ದರ ಏರಿಕೆಯ ನಂತರ ಮೆಟ್ರೋ ಪ್ರಯಾಣಿಕರ ಪ್ರಮಾಣ ಶೇ.13ರಷ್ಟು ಕುಸಿತ ಕಂಡಿದೆ. ಫೆಬ್ರವರಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಇಳಿಕೆ ಕಂಡುಬಂದಿದ್ದು, ಇದು ಪ್ರಯಾಣಿಕರಿಗೆ ಬೆಲೆ ಏರಿಕೆ ಹೊರೆಯಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಗ್ರೀನ್‍ಪೀಸ್ ತಿಳಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.72.9ರಷ್ಟು ಪ್ರಯಾಣಿಕರು ಪರಿಷ್ಕೃತ ಸಾರಿಗೆ ವೆಚ್ಚವು ನಾವು ಒಂದು ಹೊತ್ತಿನ ಊಟಕ್ಕೆ ವ್ಯಯಿಸುವ ಖರ್ಚಿಗೆ ಸಮನಾಗಿದೆ ಅಥವಾ ಅದಕ್ಕಿಂತಲೂ ಹೆಚ್ಚೇ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪುರುಷರಿಗಿಂತ ಹೆಚ್ಚಾಗಿ ತಮ್ಮ ಓಡಾಟಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಮಹಿಳೆಯರು ಮೆಟ್ರೋ ಬೆಲೆ ಏರಿಕೆಯ ಬಿಸಿಯನ್ನು ತಟ್ಟಿದೆ.

ಇದು ಅವರ ಓಡಾಟ ಮತ್ತು ಸುರಕ್ಷತೆ ಮೇಲೂ ಪ್ರಭಾವ ಬೀರುತ್ತಿದೆ. ಅಲ್ಲದೆ, ದರ ಏರಿಕೆಯು ವಿದ್ಯಾರ್ಥಿಗಳು ಮತ್ತು ಕೆಲಸ ತೆರಳಲು ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರು ಮೆಟ್ರೋ ಸಂಚಾರದಿಂದ ವಿಮುಖರಾಗುವಂತೆ ಮಾಡುತ್ತಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.40.4ರಷ್ಟು ಜನರು ಮೆಟ್ರೋವನ್ನು ತಮ್ಮ ಪ್ರಾಥಮಿಕ ಸಾರಿಗೆಯಾಗಿ ಬಳಸುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಶೇ.73.4ರಷ್ಟು ಜನರು ಸಾರಿಗೆಗಾಗಿ ದಿನಕ್ಕೆ ಸುಮಾರು 50 ರಿಂದ150 ರೂ.ಖರ್ಚು ಮಾಡುತ್ತಾರೆ. ಶೇ.68ರಷ್ಟು ಮಂದಿ ಪ್ರಯಾಣ ದರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.75ರಷ್ಟು ಮಂದಿ ದರ ಏರಿಕೆ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಿಂದ ವಿಮುಖರಾಗಿದ್ದಾರೆ. ಮೆಟ್ರೋ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಲಾಭದ ಉದ್ಯಮವಲ್ಲ: ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗ್ರೀನ್‍ಪೀಸ್ ಇಂಡಿಯಾ ಪ್ರಚಾರಕ ಆಕಿಜ್ ಫಾರೂಕ್, ‘ಸಾರ್ವಜನಿಕ ಸಾರಿಗೆಯು ಜನರಿಗೆ ಸೇವಾಸೌಲಭ್ಯವನ್ನು ಒದಗಿಸಬೇಕೆ ಹೊರತು, ಲಾಭ ಮಾಡುವ ಉದ್ಯಮವಾಗಬಾರದು. ಮೆಟ್ರೋ ಪ್ರಯಾಣ ದರ ಏರಿಕೆಯು ಈಗಾಗಲೇ ಕೈಗೆಟುಕುವ ದರದಲ್ಲಿ ಒದಗಿಸಬೇಕು’ ಎಂದು ಆಗ್ರಹಿಸಿದರು.

ಸಾರ್ವಜನಿಕ ಸಾರಿಗೆಗಾಗಿಯೇ ಒಂದು ಬಜೆಟ್ ಅಗತ್ಯವಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು. ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಲ್ಲಿಯೇ ಪ್ರಯಾಣಿಸುವಂತೆ ಅವರನ್ನು ಉತ್ತೇಜಿಸಲು ಸರಕಾರವು ಹವಾಮಾನ ಟಿಕೆಟ್‍ಗಳನ್ನು ಪರಿಚಯಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಯಾಣಿಕ ಐರೀನ್ ಆನ್ ಕುಟ್ಟಿಚಿರಾ ಪ್ರತಿಕ್ರಿಯಿಸಿ, ‘ದೈನಂದಿನ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ನಾನು, ಪ್ರತಿಯೊಂದು ಪ್ರಯಾಣ ದರ ಹೆಚ್ಚಳವು ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅನೇಕರು ಕೆಲಸ ಅಥವಾ ಕಾಲೇಜಿಗೆ ಮೆಟ್ರೋವನ್ನು ಅವಲಂಬಿಸಿರುತ್ತಾರೆ. ಆದರೆ ದರ ಹೆಚ್ಚಳ ಮೆಟ್ರೋ ಕಷ್ಟಕರವಾಗಿದೆ. ಹೆಚ್ಚು ಹಣ ಪಾವತಿಸಲು ಶಕ್ತರಾಗಿರುವವರಿಗೆ ಮಾತ್ರವಲ್ಲದೆ ಎಲ್ಲರಿಗೂ ಸೇವೆ ಸಲ್ಲಿಸುವ ಸಾರಿಗೆ ವ್ಯವಸ್ಥೆಗಾಗಿ ಕಲ್ಪಿಸಬೇಕು ಎಂದು ಅವರು ಕೋರಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News