ಕೃಷಿ ಕಾಯಿದೆಗಳನ್ನು ರದ್ದುಗೊಳಿಸದಿದ್ದರೆ ಹೋರಾಟ: ಸಂಯುಕ್ತ ಹೋರಾಟ ಸಮಿತಿ ಎಚ್ಚರಿಕೆ
ಬೆಂಗಳೂರು : ಕೇಂದ್ರ ಬಿಜೆಪಿ ಸರಕಾರ ತಂದಿರುವ ಕೃಷಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೂಡಲೇ ರದ್ದುಗೊಳಿಸದಿದ್ದರೆ ಕೇಂದ್ರ ಸರಕಾರದ ವಿರುದ್ಧ ಮಾಡಿದ ರೀತಿಯಲ್ಲೇ 42 ಸಂಘಟನೆಗಳೊನ್ನೊಳಗೊಂಡ ಸಂಯುಕ್ತ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಹೋರಾಟ ಮಾಡಲಿದೆ ಎಂದು ಸಂಯುಕ್ತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಶುಕ್ರವಾರ ನಗರದ ಶಾಸಕರ ಭವನದಲ್ಲಿ ಸಂಯುಕ್ತ ಹೋರಾಟದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪ, ಹಿಂದಿನ ದಿನಗಳಲ್ಲಿ ಬಜೆಟ್ ಮಂಡನೆ ಆಗುತ್ತೆಂದರೆ ಬಹಳ ಕಾತುರದಿಂದ ಕಾಯುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಬಜೆಟ್‍ನ ಪಾವಿತ್ರ್ಯತೆಯು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದ ಬಜೆಟ್ ಮೇಲಿನ ಆಸಕ್ತಿ ಕಳೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಯವ್ಯಯ ದುಡಿಯುವ ಜನರ ಪರವಾಗಿರಬೇಕು. ಈಗಿನ ಆಯವ್ಯಯಗಳೆಲ್ಲವೂ ಸಂಪತ್ತು ಸೃಷ್ಟಿ ಮಾಡುವರ ಪರವಾಗಿವೆ. ಕೇಂದ್ರ ಸರಕಾರ ಯಾವ ಮುಲಾಜು ಇಲ್ಲದೇ ದುಡಿಯುವ ವರ್ಗವನ್ನು ಕಡೆಗಣಿಸಿದೆ. ರಾಜ್ಯ ಸರಕಾರದ ಸಿದ್ದರಾಮಯ್ಯ ಕೂಡ ಅದೇ ಹಾದಿ ತುಳಿದಿದ್ದಾರೆ. ದೇಸಿಯ ಕೈಗಾರಿಕೆಗಳ ಜೊತೆಗೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಬಜೆಟ್ ಇದೆಯೇ ವಿನಃ, ರೈತ, ದಲಿತ, ಕಾರ್ಮಿಕ, ಜನಸಾಮಾನ್ಯರ ಪರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಬಸವರಾಜಪ್ಪ ಹೇಳಿದರು.
ಕೈಗಾರಿಕೆಗಳಿಗೆ, ಬಂಡವಾಳಶಾಹಿಗಳಿಗೆ ಕೊಟ್ಟಿರುವ ರಿಯಾಯತಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ರಿಯಾಯಿತಿ ದುಡಿಯುವ ವರ್ಗದವರಿಗೆ ಕೊಟ್ಟಿದ್ದರೇ ಬಹಳ ಸಂತೋಷ ಪಡುತ್ತಿದ್ದೆವು. ಇವರು ದುಡಿಯುವ ವರ್ಗದವರನ್ನು ಭಿಕ್ಷುಕರನ್ನಾಗಿಸಿಕೊಂಡಿದ್ದಾರೆ. ಇಂದು ವಿರೋಧ ಪಕ್ಷದವರಿಗೆ ಬಜೆಟ್ ಅಂದರೆ ಏನು ಎನ್ನುವುದೇ ಗೊತ್ತಿಲ್ಲದಂತ ಪರಿಸ್ಥಿತಿ ಇದೆ. ಯಾವ ಸಮುದಾಯಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವ ಅಂಕಿ-ಅಂಶಗಳನ್ನು ಮುಂದಿಟ್ಟು ಮಾತನಾಡಬೇಕು. ಅದು ಬಿಟ್ಟು ಹಲಾಲ್ ಬಜೆಟ್ ಎಂದು ಕೂಗುವುದು ಬುದ್ದಿಹೀನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ವಿಪಕ್ಷದ ನಾಯಕ ಮಾತನಾಡುತ್ತಾರೆಂದರೆ, ಆಡಳಿತ ಪಕ್ಷದವರೆಲ್ಲರೂ ಕಿವಿಕೊಟ್ಟು ಕೇಳಿಸಿಕೊಳ್ಳುತ್ತಿದ್ದರು. ಆದರೆ ಇಂದು ವಿಪಕ್ಷ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ, ಆಡಳಿತ ಪಕ್ಷದ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ ಯಾರೂ ಇಷ್ಟಪಡುತ್ತಿಲ್ಲ. ಜನಪರ ಚಳವಳಿಯಿಂದ ಬಂದವರು ವಿಧಾನಸೌಧಕ್ಕೆ ಹೋಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಾನಸೌಧಕ್ಕೆ ಹೋಗುವರು ಯಾರು ಎಂದು ನೋಡದಾಗ ಬಂಡವಾಳಶಾಹಿಗಳು, ಕಳ್ಳರು-ಕದೀಮರೇ ಆಗಿದ್ದಾರೆ ಎಂದು ಬಸವರಾಜಪ್ಪ ಹೇಳಿದರು.
ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ವಿಚಾರಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಈಗಲೂ ಬಜೆಟ್‍ನಲ್ಲಿ ಸೇರಿಸುವುದಕ್ಕೆ ಅವಕಾಶವಿದೆ. ಆದುದರಿಂದ ಸಿದ್ದರಾಮಯ್ಯ ಕೂಡಲೇ ಸಂಯುಕ್ತ ಹೋರಾಟದ ನಿಯೋಗದೊಂದಿಗೆ ಸಭೆ ಮಾಡಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ, ಎ.17ರ ನಂತರ ನಿರಂತರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟದ ಪದಾಧಿಕಾರಿಗಳಾದ ಎಸ್.ಆರ್.ಹೀರೇಮಠ್, ಬಡಗಲಪುರ ನಾಗೇಂದ್ರ, ಟಿ.ಯಶ್ವಂತ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಕೆ.ವಿ.ಭಟ್, ಕುಮಾರ್ ಸಮತಳ, ಶಿವಕುಮಾರ್, ಗೋಪಾಲ್ ಉಪಸ್ಥಿತರಿದ್ದರು.