×
Ad

ಹನಿಟ್ರ್ಯಾಪ್ ಅಲ್ಲ, ಕೊಲೆಗೆ ಯತ್ನವೆಂದು ದೂರು ಕೊಟ್ಟ ಸಚಿವ ರಾಜಣ್ಣ ಪುತ್ರ

Update: 2025-03-27 19:44 IST

ಬೆಂಗಳೂರು : ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಕೆ ಮಾಡಿದ್ದು, ತಮ್ಮ ಕೊಲೆಗೆ ಯತ್ನಿಸಿದ್ದು, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುರುವಾರ ಇಲ್ಲಿನ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್‍ಮೋಹನ್ ಅವರಿಗೆ ಲಿಖಿತವಾಗಿ ದೂರು ನೀಡಿರುವ ರಾಜೇಂದ್ರ ರಾಜಣ್ಣ, ಡಿಜಿಯವರ ಸಲಹೆ ಮೇರೆಗೆ ಶುಕ್ರವಾರ(ಮಾ.28) ತುಮಕೂರು ಜಿಲ್ಲಾ ಎಸ್ಪಿಯವರಿಗೆ ದೂರು ಸಲ್ಲಿಕೆ ಮಾಡಲಿದ್ದಾರೆ.

ಇನ್ನೂ, ಯಾವುದೇ ಹೆಸರು ಅಥವಾ ಮೊಬೈಲ್ ನಂಬರ್ ಕುರಿತು ಉಲ್ಲೇಖಿಸದೇ ದೂರು ನೀಡಿರುವ ರಾಜೇಂದ್ರ, ''ಶಾಮಿಯಾನ ಹಾಕುವ ನೆಪದಲ್ಲಿ ಬಂದಿದ್ದ ಇಬ್ಬರು ನನ್ನ ಮೇಲೆ ಹಲ್ಲೆ ಮಾಡುವ ಅಥವಾ ಕೊಲೆ ಮಾಡುವ ಸಂಚಿನ ಭಾಗವಾಗಿದ್ದರು. ಆದರೆ ಅವರ ಪ್ರಯತ್ನ ಯಶಸ್ವಿಯಾಗಿಲ್ಲ” ಎಂದು ದೂರಿನಲ್ಲಿ ಉಲ್ಲೇಖ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜೇಂದ್ರ, ನಾನು ಡಿಜಿಪಿಯವರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ಹನಿಟ್ರ್ಯಾಪ್ ಯತ್ನದ ಬಗ್ಗೆ ಸಚಿವ ಕೆಎನ್ ರಾಜಣ್ಣ ಸಹ ಗೃಹಸಚಿವರಿಗೆ ಲಿಖಿತ ದೂರನ್ನು ನೀಡಿದ್ದಾರೆ. ಆದರೆ, ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ, ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಿತ್ತು ಎಂದರು.

ನನ್ನ ಮೇಲೆ ಹತ್ಯೆ ಯತ್ನ ನಡೆದಿದೆ. ನ.16ರಂದು ಮಗಳ ಹುಟ್ಟುಹಬ್ಬವಿದ್ದುದರಿಂದ ಮುಂಚಿನ ದಿನ ಶಾಮಿಯಾನ ಹಾಕಲು ಬಂದ ಕೆಲವರು ನನ್ನ ಮೇಲೆ ಹತ್ಯೆ ಯತ್ನ ನಡೆಸಿ ವಿಫಲವಾಗಿದ್ದಾರೆ. ಜನವರಿ ತಿಂಗಳಿನಲ್ಲಿ ನನಗೆ ದೊರೆತ ಒಂದು ಆಡಿಯೊದಲ್ಲಿ ಈ ವಿಚಾರ ತಿಳಿಯಿತು. ನನ್ನನ್ನ ಹತ್ಯೆ ಮಾಡಲು ಸಂಚು ರೂಪಿಸಿರುವುದರ ಕುರಿತು ಹಾಗೂ 5 ಲಕ್ಷ ಸುಪಾರಿ ಹಣ ವರ್ಗಾವಣೆಯ ಕುರಿತು ಆ ಆಡಿಯೊದಲ್ಲಿದೆ ಎಂದು ಅವರು ಹೇಳಿದರು,

ಆಡಿಯೊ ಸಮೇತ ಇಂದು ಡಿಜಿಯವರಿಗೆ ದೂರು ನೀಡಿದ್ದೇನೆ. ಸ್ಥಳೀಯ ಜಿಲ್ಲಾ ಎಸ್ಪಿಯವರಿಗೆ ದೂರು ನೀಡುವಂತೆ ಡಿಜಿಯವರು ಹೇಳಿದ್ದಾರೆ. ನಾಳೆ ಸ್ಥಳಿಯ ಎಸ್ಪಿಯವರಿಗೆ ದೂರು ನೀಡುತ್ತೇನೆ. ಆದರೆ, ಹತ್ಯೆ ಸಂಚು ಹಿಂದಿನ ಉದ್ದೇಶ ನನಗೆ ಗೊತ್ತಿಲ್ಲ ಎಂದು ರಾಜೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News