ಮಳೆ ಹಾನಿ ಪ್ರದೇಶಗಳಿಗೆ ಡಿಸಿ, ಸಿಇಒ ಕಡ್ಡಾಯ ಭೇಟಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮಳೆ ಹಾನಿ ಪ್ರದೇಶಗಳಿಗೆ ಆಯಾ ಜಿಲ್ಲಾಧಿಕಾರಿಗಳು, ಸಿಇಒ ತಕ್ಷಣ ಕಡ್ಡಾಯವಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನದಲ್ಲಿ ರಾಜ್ಯದ ಪ್ರಗತಿ ಪರಿಶೀಲನೆ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜತೆ ಸಭೆ ನಡೆಸಿದ ಅವರು, ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.
ಮಳೆ ಹಾನಿಗೆ ಪರಿಹಾರ ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಜಿಲ್ಲೆಗಳಲ್ಲಿ ಎಸ್‍ಡಿಆರ್‌ಎಫ್ ಅಡಿ ಒಟ್ಟಾರೆಯಾಗಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಲಭ್ಯವಿದೆ. ಜತೆಗೆ, ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾದರೆ ಈಗಾಗಲೇ ಪರಿಹಾರ ಒದಗಿಸುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ತಕ್ಷಣ ಪರಿಹಾರ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚಿಸಿದರು.
ಅದರಲ್ಲೂ, ಭೂಕುಸಿತದಂತಹ ಪ್ರಕರಣಗಳಲ್ಲಿ ಸಾವಿನ ಸಂಭಾವ್ಯತೆಯನ್ನು ತಪ್ಪಿಸಲು, ಜನರ ತೆರವು ಕಾರ್ಯ ಸೇರಿದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ಹಾನಿ ಪ್ರದೇಶಗಳಿಗೆ ಡಿಸಿ, ಸಿಇಒ ತಕ್ಷಣ ಕಡ್ಡಾಯವಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಒದಗಿಸಬೇಕು. ಸಂಪೂರ್ಣ ಮನೆ ಹಾನಿ ಪ್ರಕರಣಗಳಲ್ಲಿ 1.20 ಲಕ್ಷ ರೂ., ಮನೆ ಹಾನಿ ತಕ್ಷಣ ಪರಿಹಾರ ಒದಗಿಸಲಾಗುತ್ತಿದೆ. ಅಂತಹವರಿಗೆ ಹೊಸ ಮನೆ ಒದಗಿಸಲು ಕಳೆದ ವರ್ಷದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವಿವಿಧ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ನೆರವು ಒದಗಿಸಬೇಕು. ಜತೆಗೆ, ಅತಿವೃಷ್ಟಿ ಅನಾಹುತ ಎದುರಿಸಲು ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಳೆ ಬಗ್ಗೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲು ಯಾಕೆ ಸಾಧ್ಯವಿಲ್ಲ. ತಗ್ಗು ಪ್ರದೇಶ, ನೀರು ನಿಲ್ಲುವ ಪ್ರದೇಶದ ಮಾಹಿತಿ ಮೊದಲೇ ಇರುತ್ತದೆ. ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಬೇಕು. ತಾತ್ಕಾಲಿಕ ಕ್ರಮಗಳೊಂದಿಗೆ ಶಾಶ್ವತ ಪರಿಹಾರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮ ಮಟ್ಟದಲ್ಲಿ ಎಲ್ಲ ಸರಕಾರಿ ಜಮೀನು ಗುರುತಿಸಿ, ಒತ್ತುವರಿಯನ್ನು ಗುರುತಿಸುವ ಕಾರ್ಯ ಶೇ.95ರಷ್ಟು ಪೂರ್ಣಗೊಂಡಿದೆ. 14,15,492 ಎಕರೆ ಸರಕಾರಿ ಜಮೀನು ಒತ್ತುವರಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಗರ್ ಹುಕುಂ ಒಟ್ಟು 14,28,838 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ವಿಲೇವಾರಿ ಬಹಳ ವಿಳಂಬವಾಗುತ್ತಿದ್ದು, ಅರ್ಹ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದೂ ಅವರು ಸಭೆಯಲ್ಲಿ ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.