ಕೇಂದ್ರ ಸರಕಾರದ ʼಜಾತಿಗಣತಿʼಯಿಂದ ಪ್ರತಿಯೊಂದು ಸಮಾಜದ ನಿಖರ ಅಂಕಿ-ಅಂಶ ಲಭ್ಯವಾಗಲಿವೆ : ರಾಮದಾಸ್ ಅಠಾವಳೆ
ಬೆಂಗಳೂರು : ಸಮಾಜದಲ್ಲಿರುವ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ದೇಶದಲ್ಲಿ ಜಾತಿ ಗಣತಿ ನಡೆಸಲು ನಿರ್ಧರಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ತಿಳಿಸಿದರು.
ಶನಿವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದುಳಿದ ವರ್ಗಗಳಲ್ಲಿ ಯಾವ ಯಾವ ಜಾತಿಗಳ ಜನರು ಎಷ್ಟಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದುದರಿಂದ, ಹಿಂದುಳಿದ ವರ್ಗಗಳ ಜನಗಣತಿ ಮಾಡುವಂತೆ ನಾನು ಹಿಂದೆಯೇ ಆಗ್ರಹಿಸಿದ್ದೆ ಎಂದು ಹೇಳಿದರು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿಯನ್ನು ನಡೆಸುವಂತೆ ಆಗ್ರಹಿಸುತ್ತಿದ್ದರು. ಈಗ ಕೇಂದ್ರ ಸರಕಾರವು ಎಲ್ಲ ಜಾತಿಗಳ ಗಣತಿ ನಡೆಸಲು ಮುಂದಾಗಿರುವುದರಿಂದ ಅವರು ಸಹಕಾರ ನೀಡಬೇಕು ಎಂದು ರಾಮದಾಸ್ ಅಠಾವಳೆ ಕೋರಿದರು.
ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ವಯ ದೇಶದಲ್ಲಿ ಶೇ.52ರಷ್ಟು ಹಿಂದುಳಿದ ವರ್ಗದವರು ಇದ್ದಾರೆ. ಇದೀಗ, ಕೇಂದ್ರ ಸರಕಾರವು ಜನ ಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸುತ್ತಿರುವುದರಿಂದ, ಪ್ರತಿಯೊಂದು ಸಮಾಜದ ನಿಖರ ಅಂಕಿ ಅಂಶಗಳು ಲಭ್ಯವಾಗಲಿವೆ ಎಂದು ರಾಮದಾಸ್ ಅಠಾವಳೆ ಅಭಿಪ್ರಾಯಪಟ್ಟರು.
ಜನಗಣತಿ ಕೇಂದ್ರ ಸರಕಾರದ ಜವಾಬ್ದಾರಿ: ಜನಗಣತಿ ಮಾಡುವುದು ಕೇಂದ್ರ ಸರಕಾರದ ಜವಾಬ್ದಾರಿ. ಅದಕ್ಕಾಗಿಯೇ ಸರಕಾರದ ಅಧೀನದಲ್ಲಿ ಸೆನ್ಸಸ್(ಜನ ಗಣತಿ) ಆಯೋಗವಿದೆ. ರಾಜ್ಯಗಳಿಗೆ ಜನ ಗಣತಿ ಮಾಡುವ ಅಧಿಕಾರವಿಲ್ಲ. ಆದರೂ, ಕೆಲವು ರಾಜ್ಯಗಳಲ್ಲಿ ಜಾತಿ ಗಣತಿಗಳನ್ನು ಮಾಡಿದ್ದಾರೆ. ಈಗ ಕೇಂದ್ರ ಸರಕಾರ ಮಾಡುವಂತಹ ಜನ ಗಣತಿ ಹಾಗೂ ಜಾತಿ ಗಣತಿಯಲ್ಲಿ ಎಲ್ಲ ವಿಚಾರಗಳು ಸೇರಲಿವೆ ಎಂದು ಅವರು ತಿಳಿಸಿದರು.
ಅಹಮದಾಬಾದ್‍ನಲ್ಲಿ ನಡೆದಂತಹ ವಿಮಾನ ಪತನದ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ದೊಡ್ಡ ದುರಂತ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೋವುಂಟು ಮಾಡಿದಂತಹ ದುರ್ಘಟನೆ. ಇದರಲ್ಲಿ ಗುಜರಾತ್‍ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ನಿಧನ ಹೊಂದಿದರು. ಲಂಡನ್‍ನಲ್ಲಿರುವ ತಮ್ಮ ಪತ್ನಿ ಹಾಗೂ ಮಗಳನ್ನು ಭೇಟಿಯಾಗಲು ಅವರು ಹೊರಟಿದ್ದರು ಎಂದು ರಾಮದಾಸ್ ಅಠಾವಳೆ ಹೇಳಿದರು.
ವಿಮಾನದ ಎರಡೂ ಇಂಜಿನ್‍ಗಳು ಏಕ ಕಾಲಕ್ಕೆ ವಿಫಲವಾದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಾಂತ್ರಿಕ ಕಾರಣಗಳು ಏನಿರಬಹುದು ಎಂಬುದರ ಕುರಿತು ತಜ್ಞರ ಸಮಿತಿಯು ಪರಿಶೀಲನೆ ನಡೆಸುತ್ತಿದೆ. ಅದರಲ್ಲಿ ಯಾವ ಕಾರಣಕ್ಕೆ ಈ ದುರಂತ ಸಂಭವಿಸಿತು ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.
ವಿಮಾನ ದುರಂತ ಹಾಗೂ ರೈಲ್ವೆ ಅಪಘಾತಗಳು ಸಂಭವಿಸುತ್ತಿರುವುದರಿಂದ ವಿಪಕ್ಷಗಳು ಸಂಬಂಧಪಟ್ಟ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದುರ್ಘಟನೆಗಳು ನಡೆದಾಗ ರಾಜೀನಾಮೆ ನೀಡುವುದು ಸಮಸ್ಯೆಗೆ ಪರಿಹಾರವಲ್ಲ. ವಿಪಕ್ಷದವರು ರಾಜಕೀಯ ಕಾರಣಗಳಿಗಾಗಿ ಪ್ರಧಾನಿ, ಕೇಂದ್ರ ಸಚಿವರ ರಾಜೀನಾಮೆಗಳನ್ನು ಕೇಳುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕದಲ್ಲೂ ಎನ್‍ಡಿಎ ಮೈತ್ರಿಕೂಟ ಸೇರಲಿರುವ ಆರ್.ಪಿ.ಐ: ರಾಷ್ಟ್ರಮಟ್ಟದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್.ಪಿ.ಐ) ಎನ್‍ಡಿಎ ಮೈತ್ರಿಕೂಟದಲ್ಲಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ಆರ್‌ಪಿಐ ಎನ್‍ಡಿಎ ಸೇರ್ಪಡೆಯಾಗಿಲ್ಲ. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಮೂರು ಪಕ್ಷಗಳು ಸೇರಿ ಜಂಟಿ ಹೋರಾಟ ನಡೆಸಲಿವೆ.
-ರಾಮದಾಸ್ ಅಠಾವಳೆ, ಕೇಂದ್ರ ಸಚಿವ