ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಶ್ವರ್ಯಾ ಗೌಡಗೆ ಷರತ್ತು ಬದ್ಧ ಜಾಮೀನು
ಐಶ್ವರ್ಯಾ ಗೌಡ
ಬೆಂಗಳೂರು: ಚಿನ್ನದ ವ್ಯಾಪಾರಿಗೆ ಸುಮಾರು 9.82 ಕೋಟಿ ರೂ. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಬಂಧನಕ್ಕೊಳಗಾಗಿದ್ದ ಐಶ್ವರ್ಯಾ ಗೌಡ ಅವರಿಗೆ ಬೆಂಗಳೂರಿನ 1ನೇ ಸಿಸಿಎಚ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಆರೋಪಿ ಐಶ್ವರ್ಯ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮಂಗಳವಾರ ಷರತ್ತುಬದ್ದ ಜಾಮೀನು ನೀಡಿದ್ದು, 5 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶೂರಿಟಿ ನೀಡಬೇಕು. ವಿಳಾಸ ಬದಲಾವಣೆ ಮಾಡಬಾರದು ಮತ್ತು ಬೆಂಗಳೂರು ಬಿಟ್ಟು ಹೋಗಬಾರದು ಎಂದು ಆರೋಪಿಗೆ ಷರತ್ತು ವಿಧಿಸಲಾಗಿದೆ.
ಐಶ್ವರ್ಯ ಗೌಡ ಪರ ವಾದ ಮಂಡಿಸಿದ ವಕೀಲ ಎಸ್.ಸುನೀಲ್ ಕುಮಾರ್ ಅವರು, ಅನುಸೂಚಿತ ಪ್ರಕರಣವಿಲ್ಲದಿದ್ದರೂ ಈ.ಡಿ. ಅವರನ್ನು ಬಂಧಿಸಿದೆ. ಮಹಿಳೆಗೆ ಬಂಧನದಿಂದ ವಿಶೇಷ ವಿನಾಯಿತಿ ಇದೆ ಎಂದು ಹೇಳಿದರು. ಇನ್ನು, ವಕೀಲರ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದ್ದಾರೆ.
ಪ್ರಕರಣದ ವಿವರ: ‘ನಾನು ಡಿ.ಕೆ. ಸುರೇಶ್ ಅವರ ಸಹೋದರಿ, ನನಗೆ ಅನೇಕ ರಾಜಕೀಯ ನಾಯಕರ ಪರಿಚಯವಿದೆ' ಎಂದು ನಂಬಿಸಿ ಸಾಲದ ರೂಪದಲ್ಲಿ ಚಿನ್ನ ಪಡೆದು ವಂಚಿಸಿದ ಆರೋಪ ಐಶ್ವರ್ಯಾ ಗೌಡ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ವಾರಾಹಿ ವಲ್ರ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್ ಐತಾಳ್ ಎಂಬುವವರು ನೀಡಿದ್ದ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ. ಎನ್ ಹಾಗೂ ನಟ ಧಮೇರ್ಂದ್ರ ಬಿ ಅವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪದ ಮೇರೆಗೆ ಐಶ್ವರ್ಯಾ ಗೌಡ ವಿರುದ್ಧ ಪಿಎಂಎಲ್‍ಎ ಅಡಿಯಲ್ಲಿ ಈ.ಡಿ. ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಎ.25ರಂದು ಬಂಧಿಸಿದ್ದರು.