ಬೆಂಗಳೂರು | ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ: ಆರೋಪಿ ಬಂಧನ
ಬೆಂಗಳೂರು : ವಿಚ್ಛೇದಿತ ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯ ಖಾಸಗಿ ಫೋಟೊ, ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಯುವಕನನ್ನು ಇಲ್ಲಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಶ್ರೀನಿವಾಸ್ ಎಂಬುವನನ್ನು ಬಂಧಿಸಲಾಗಿದೆ. ದೂರುದಾರ ಮಹಿಳೆಯು ಮೂಲತಃ ಆಂಧ್ರಪ್ರದೇಶದವರು. 2014ರಲ್ಲಿ ಮದುವೆಯಾಗಿದ್ದು, ಎರಡು ವರ್ಷ ಪತಿಯೊಂದಿಗೆ ಅನೋನ್ಯವಾಗಿದ್ದರು. ದಂಪತಿ ನಡುವೆ ಮೂಡಿದ ವೈಮನಸ್ಸಿನಿಂದ 2016ರಿಂದ ಪತಿಯಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೀವನಕ್ಕಾಗಿ 2019ರಲ್ಲಿ ಬೆಂಗಳೂರಿನ ಕಾಡುಗೋಡಿಗೆ ಬಂದ ಮಹಿಳೆಯು, ಆರೋಪಿ ನಡೆಸುತ್ತಿದ್ದ ಡಿಜಿಟಲ್ ಸೇವಾ ಕೇಂದ್ರದಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ದಿನ ಕಳೆದಂತೆ ಆರೋಪಿಯೊಂದಿಗೆ ಸ್ನೇಹ ಬೆಳೆಸಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು.
ಕಾಲಕ್ರಮೇಣ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಅಲ್ಲದೇ ಬಾಡಿಗೆ ಮನೆ ಮಾಡಿ ಆಕೆಯೊಂದಿಗೆ ವಾಸವಾಗಿದ್ದ. ನಂತರ ತನ್ನ ಖಾಸಗಿ ವಿಡಿಯೋವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೆಲದಿನಗಳ ಬಳಿಕ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದ. 25 ಗ್ರಾಂ ಚಿನ್ನ ಹಾಗೂ ಒಂದು ಲಕ್ಷ ರೂಪಾಯಿ ಹಣ ನೀಡಿದರೂ ಬೆದರಿಕೆ ನೀಡುವುದನ್ನು ಮುಂದುವರೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.