×
Ad

ಗಡಿನಾಡು ಶಿಕ್ಷಣ ನಿರ್ದೇಶನಾಲಯದ ಅಗತ್ಯವಿದೆ : ಪ್ರೊ.ಬರಗೂರು ರಾಮಚಂದ್ರಪ್ಪ

Update: 2025-06-18 22:28 IST

ಬೆಂಗಳೂರು: ಗಡಿನಾಡಿನ ಕನ್ನಡ ಪ್ರದೇಶಗಳಲ್ಲಿ ಶಿಕ್ಷಣ ನೆಲೆಯೂರುವಂತೆ ಕೆಲಸ ಮಾಡಲು ಗಡಿನಾಡು ಶಿಕ್ಷಣ ನಿರ್ದೇಶನಾಲಯದ ಅಗತ್ಯವಿದ್ದು, ರಾಜ್ಯ ಸರಕಾರ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ಆಯೋಜಿಸಿದ್ದ ‘ಚಂಪಾ ಸಿರಿಗನ್ನಡ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣಕ್ಕೆ ತಲಾ ಒಬ್ಬರು ನಿರ್ದೇಶಕರು ಹಾಗೂ ಸಿಬ್ಬಂದಿ ಇರುತ್ತಾರೆ. ಅದರಂತೆ ಗಡಿನಾಡು ಶಿಕ್ಷಣ ನಿರ್ದೇಶನಾಲಯ ರಚಿಸಿ ಒಬ್ಬರು ನಿರ್ದೇಶಕರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು ಎಂದು ತಿಳಿಸಬೇಕು ಎಂದು ತಿಳಿಸಿದರು.

ಭೌಗೋಳಿಕ ವಿವಾದವನ್ನು ಭಾವನಾತ್ಮಕ ವಿವಾದವನ್ನಾಗಿಸುವ ಅನೇಕ ಶಕ್ತಿಗಳಿವೆ. ಮರಾಠಿಗರು ಯಾವಾಗಲೂ ಆ ಕೆಲಸವನ್ನು ಮಾಡುತ್ತಿದ್ದಾರೆ. ಗಡಿನಾಡಿನ ಎಲ್ಲ ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂಧಿಸುವ ವ್ಯಕ್ತಿ ಅಶೋಕ ಚಂದರಗಿ ಅವರು. ಭಾಷೆಯೆನ್ನುವುದು ಕೂಡ ಒಂದು ಬದುಕು. ಕನ್ನಡಿಗರ ಬದುಕನ್ನು ರೂಪಿಸಿದರೆ, ಕನ್ನಡ ತನಗೆ ತಾನಾಗಿಯೇ ರೂಪುಗೊಳ್ಳುತ್ತದೆ ಎಂದರು.

ಗಡಿನಾಡಿನಲ್ಲಿ ಭಾಷೆಯ ಸಮಸ್ಯೆ ಮಾತ್ರ ಇಲ್ಲ. ಬದುಕಿನ ಸಮಸ್ಯೆಯೂ ಇದೆ. ಬದುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು, ಭಾಷಾ ಚಳವಳಿಗಳು ಬದುಕಿನ ಚಳವಳಿಯಾಗಬೇಕು. ಗಡಿನಾಡಿನ ಜನರು ಪರಕೀಯ ಪ್ರಜ್ಞೆಯಿಂದ ನರಳದೇ ಅವರೂ ಕರ್ನಾಟಕದವರು ಎಂದುಕೊಳ್ಳಲು, ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡಿ ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ಬೆಳಗಾವಿ ವಿವಾದ ಸುಪ್ರೀಂ ಕೋರ್ಟ್‍ನಲ್ಲಿದೆ. ಯಾವಾಗ ಬಗೆಹರಿಯುತ್ತದೆ ಎನ್ನುವುದು ಗೊತ್ತಿಲ್ಲ. ಆದರೆ ಮರಾಠಿಗರು ಏನು ಮಾಡಿದರೂ ಬೆಳಗಾವಿಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ. ಬೆಳಗಾವಿ ನಮ್ಮದೇ. ಬೆಳಗಾವಿ ಸೇರಿ ಗಡಿನಾಡಿನಲ್ಲಿ ಕನ್ನಡಪರ ವಾತಾವರಣ ನಿರ್ಮಾಣವಾಗಬೇಕು ಎಂದರು.

ಗಡಿನಾಡಿನಲ್ಲಿರುವ ಎಷ್ಟು ಕನ್ನಡ ಶಾಲೆಗಳಿಗೆ ನಮ್ಮ ಸರಕಾರ ಸಹಾಯ ಮಾಡುತ್ತಿದೆ. ಎಷ್ಟು ಶಾಲೆಗಳಿಗೆ ಉತ್ತಮ ಕಟ್ಟಡ ಮತ್ತು ಮೂಲ ಸೌಲಭ್ಯಗಳನ್ನು ನೀಡಿದೆ? ಕನ್ನಡವನ್ನು ಶಿಕ್ಷಣದ ಮೂಲಕ ನೆಲೆಯೂರಿಸಬೇಕು. ಅದಕ್ಕಾಗಿ ಗಡಿನಾಡಿಗೆ ರಾಜ್ಯ ಸರಕಾರ ವಿಶೇಷ ಗಮನ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಬೆಂಗಳೂರಿನ ವಸತಿ ಸಮುಚ್ಚಯ ಹಾಗೂ ಸಂಸ್ಥೆಗಳಲ್ಲಿ ಕನಿಷ್ಠ 20 ಜನರು ಕನ್ನಡ ಬರದಿದ್ದವರು ಇದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದರೆ ಅಲ್ಲಿ ಕನ್ನಡ ಕಲಿಕಾ ಕೇಂದ್ರ ಪ್ರಾರಂಭಿಸಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ 20 ಕನ್ನಡ ಕಲಿಕಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಂದ್ರಶೇಖರ್ ಪಾಟೀಲ ಅವರು ಸೈದ್ಧಾಂತಿಕವಾಗಿ ಲೋಹಿಯಾವಾದಿಯಾಗಿದ್ದರು. ಅವರು ಜಾತಿ ಸಮಸ್ಯೆಯ ಬಗ್ಗೆ ಒಳನೋಟದ ಮಾತುಗಳನ್ನಾಡುತ್ತಿದ್ದರು. ಚಂಪಾ ಅವರ ಮಾತುಗಳು ಆಕರ್ಷಕವಾಗುತ್ತಿದ್ದವು. ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮಾರ್ಕ್ಸ್‌ವಾದಿ. ಅವರು ಸಮಾಜದ ಆಳಕ್ಕೆ ಇಳಿದು ಮಾತನಾಡುತ್ತಾರೆ. ಮಾರ್ಕ್ಸ್‌, ಲೋಹಿಯಾ ಮತ್ತು ಅಂಬೇಡ್ಕರ್‌ವಾದ 3 ಸಿದ್ಧಾಂತಗಳು ಸೇರಿಕೊಂಡು 4ನೇ ಒಂದು ಜ್ಞಾನ ಸಿಗುತ್ತದೆ. ನಾವು ಆ ರೀತಿಯಲ್ಲಿ ಬೆಳೆದವರು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಉಪ ಆಯುಕ್ತೆ ಮೀನಾ ಪಾಟೀಲ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಶಂಕರ್ ಹೂಗಾರ್ ಮತ್ತಿತರರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News