×
Ad

‘ಇರಾನ್ ಮೇಲೆ ಇಸ್ರೇಲ್ ಆಕ್ರಮಣ’ ಜಾಗತಿಕ ಶಾಂತಿಗೆ ಗಂಭೀರ ಬೆದರಿಕೆ : ಆಗಾ ಸುಲ್ತಾನ್

Update: 2025-06-19 18:28 IST

ಆಗಾ ಸುಲ್ತಾನ್

ಬೆಂಗಳೂರು : ಇರಾನ್ ದೇಶದ ಮೇಲೆ ಇಸ್ರೇಲ್ ಇತ್ತೀಚೆಗೆ ನಡೆಸಿದ ಅಪ್ರಚೋದಿತ ದಾಳಿಯು ಅತ್ಯಂತ ಖಂಡನೀಯ. ಈ ಆಕ್ರಮಣವು ಅಂತರ್ ರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಗಂಭೀರ ಬೆದರಿಕೆಯಾಗಿದೆ ಎಂದು ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಆಗಾ ಸುಲ್ತಾನ್ ಅಭಿಪ್ರಾಯಪಟ್ಟಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಇಂತಹ ದ್ವೇಷದ ಕೃತ್ಯಗಳು ಈಗಾಗಲೇ ಅಸ್ಥಿರವಾಗಿರುವ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ ಮತ್ತು ಮುಗ್ಧ ನಾಗರಿಕರ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತವೆ. ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ಇಂತಹ ಸ್ಪಷ್ಟ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ಸಮುದಾಯವು ಮೌನವಾಗಿರಬಾರದು ಎಂದು ಹೇಳಿದರು.

ವಿಶ್ವಸಂಸ್ಥೆ, ಅರಬ್ ರಾಷ್ಟ್ರಗಳು ಮತ್ತು ಜಾಗತಿಕ ಶಕ್ತಿಗಳು ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸಿ ವ್ಯಾಪಕ ಅಸ್ಥಿರತೆ ಮತ್ತು ದುಃಖಕ್ಕೆ ಕಾರಣವಾಗುವ ಮತ್ತಷ್ಟು ಉಲ್ಬಣವನ್ನು ತಡೆಯಬೇಕೆಂದು ಒತ್ತಾಯಿಸಿದ ಅವರು, ಅಲಿಪ್ತತೆ ಮತ್ತು ಜಾಗತಿಕ ಶಾಂತಿಗೆ ಬೆಂಬಲ ನೀಡುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿರುವ ಭಾರತವು, ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಮತ್ತು ಇರಾನ್‍ನ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುವ ಯಾವುದೇ ಕೃತ್ಯವನ್ನು ಖಂಡಿಸಬೇಕು ಎಂದರು.

ಇಸ್ರೇಲ್ ಪರಮಾಣು ರಾಷ್ಟ್ರ, ಯುಎಸ್‍ಎ ಪರಮಾಣು ರಾಷ್ಟ್ರ. ಹಲವು ತಪಾಸಣೆಗಳ ನಂತರ ಐಎಇಎ ಮುಖ್ಯಸ್ಥರು ಇರಾನ್ ಬಳಿ ಪರಮಾಣು ಬಾಂಬ್ ಇಲ್ಲ ಎಂದು ಹೇಳಿದ್ದಾರೆ. ಯುಎಸ್‍ಎ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಇರಾನ್ ಬಳಿ ಪರಮಾಣು ಬಾಂಬ್ ಇಲ್ಲ ಎಂದು ದೃಢಪಡಿಸಿದ್ದಾರೆ ಎಂದು ಆಗಾ ಸುಲ್ತಾನ್ ಉಲ್ಲೇಖಿಸಿದರು.

ಪರಮಾಣು ಶಸ್ತ್ರಾಸ್ತ್ರಕ್ಕೆ ನಾವು ವಿರುದ್ಧವಾಗಿದ್ದೇವೆ ಎಂದು ಈಗಾಗಲೇ ಇರಾನ್ ದೇಶದ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಘೋಷಿಸಿದ್ದಾರೆ. ಇರಾನ್‍ನಲ್ಲಿ ಅಧಿಕಾರದಲ್ಲಿರುವ ಸರಕಾರವನ್ನು ಕೆಳಗಿಳಿಸಿ, ಅವರ(ಅಮೆರಿಕ, ಇಸ್ರೇಲ್) ತಾಳಕ್ಕೆ ತಕ್ಕಂತೆ ಕುಣಿಯುವ ಕೈಗೊಂಬೆ ಸರಕಾರವನ್ನು ತರುವ ಪಿತೂರಿ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News