ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ‘ಇದೊಂದು ಸುಳ್ಳು ಕರೆ’ ಎಂದ ಪೊಲೀಸರು
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜೂ.18ರ ಬುಧವಾರ ರಾತ್ರಿ ಕಳುಹಿಸಲಾದ ಇಮೇಲ್ ಸಂದೇಶದಲ್ಲಿ ಎರಡು ಬಾಂಬ್‍ಗಳನ್ನು ಇಡಲಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಒಂದು ‘ಪ್ಲಾನ್-ಎ’ನ ಭಾಗವಾಗಿ ಮೊದಲನೇ ಬಾಂಬ್ ಇಡುವುದಾಗಿ ಹಾಗೂ ಒಂದು ವೇಳೆ ಮೊದಲನೆಯದು ವಿಫಲವಾದರೆ ‘ಪ್ಲಾನ್-ಬಿ’ ಅಡಿಯಲ್ಲಿ ಎರಡನೆಯ ಬಾಂಬ್ ಇಡುವ ಬಗ್ಗೆ ಇಮೇಲ್‍ನಲ್ಲಿ ತಿಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು, ವಿಮಾನ ನಿಲ್ದಾಣ ಆವರಣದ ಸಮಗ್ರ ತಪಾಸಣೆ ನಡೆಸಿವೆ. ವಿವರವಾದ ಪರಿಶೀಲನೆಯ ನಂತರ, ಯಾವುದೇ ಸ್ಫೋಟಕಗಳು ಕಂಡು ಬಂದಿಲ್ಲ. ಇದೊಂದು ಸುಳ್ಳು ಬೆದರಿಕೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆದರಿಕೆ ಕಳುಹಿಸಲು ಬಳಸಲಾದ ಇಮೇಲ್ ಐಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತೀವ್ರ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.