ಶಕ್ತಿಸೌಧಗಳಲ್ಲಿ ಕನ್ನಡದ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಿಂತನೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ನಾಡಿನ ಶಕ್ತಿಸೌಧಗಳಾದ ವಿಧಾನಸೌಧ ಮತ್ತು ವಿಕಾಸಸೌಧಗಳನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳಾಗಿ ಮರುರೂಪಿಸುವ ಕುರಿತಂತೆ ಕಟ್ಟಡಗಳಲ್ಲಿ ಕನ್ನಡತನವನ್ನು ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆಯನ್ನು ರೂಪಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಈ ಕಟ್ಟಡಗಳ ಭವ್ಯತೆಗೆ ಪೂರಕವಾಗಿ ಆಯ್ದ ಜಾಗಗಳಲ್ಲಿ ಕನ್ನಡದ ಘೋಷಣೆಗಳನ್ನು ಅಳವಡಿಸುವ ಮಹತ್ವದ ತೀರ್ಮಾನವನ್ನು ಸರಕಾರವು ತೆಗೆದುಕೊಂಡಿದೆ. ಸಾರ್ವಜನಿಕರು ಸಾಹಿತ್ಯಿಕ ಘೋಷವಾಕ್ಯಗಳಲ್ಲದೇ, ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನೂ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ನೀಡುವ ಘೋಷವಾಕ್ಯಗಳು ಗದ್ಯಪದ್ಯಗಳ ಎರಡು ನೆಲೆಗಳಲ್ಲಿರಬೇಕು. ಅದನ್ನು ಓದಿದವರಲ್ಲಿ ಕನ್ನಡದ ಅಭಿಮಾನ ಜಾಗೃತವಾಗಬೇಕು. ಕನ್ನಡದ ಪ್ರಮುಖ ಉಪ ಸಂಸ್ಕೃತಿಗಳ ಒಳಗನ್ನು ತೆರೆದಿಡುವ ವಾಕ್ಯಗಳನ್ನು ಅವಲೋಕಿಸಬಹುದು. ಘೋಷವಾಕ್ಯಗಳು ಸಮಕಾಲೀನ ಭಾಷೆಯಲ್ಲಿರಬೇಕು. ನಿರಾಶದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಹೊರತುಪಡಿಸಬೇಕು. ಗರಿಷ್ಟ ಎರಡು ಸಾಲುಗಳಲ್ಲಿರಬೇಕಾದ ಘೋಷವಾಕ್ಯಗಳ ರಚನಕಾರರ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ಜೂ.30ರೊಳಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇ-ಮೇಲ್ chairman.kanpra@gmail.comಗೆ ಘೋಷವಾಕ್ಯಗಳ ಪಟ್ಟಿಗಳನ್ನು ಕಳುಹಿಸಿಕೊಡಬೇಕಾಗಿದೆ. ಈ ಪಟ್ಟಿಯಲ್ಲಿ ಕಳುಹಿಸಿರುವವರ ಸಂಪರ್ಕ ಸಂಖ್ಯೆ ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಘೋಷವಾಕ್ಯಗಳನ್ನು ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿ ಕಳುಹಿಸಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.