×
Ad

ಕಂದಾಯ ಭವನಕ್ಕೆ ಅನಿರೀಕ್ಷಿತ ಭೇಟಿ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ

Update: 2025-06-19 21:56 IST

ಬೆಂಗಳೂರು : ಇಲ್ಲಿನ ಕೆ.ಜಿ ರಸ್ತೆಯಲ್ಲಿ ಕಂದಾಯ ಭವನದಲ್ಲಿರುವ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅನಿರೀಕ್ಷಿತ ಭೇಟಿ ನೀಡಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಕಚೇರಿಯಲ್ಲಿ ರನ್ನಿಂಗ್ ರೇಟ್ ಎಷ್ಟು ನಡೆಯುತ್ತಿದೆ. ಅದನ್ನು ಕಚೇರಿಯ ನಾಮಫಲಕದಲ್ಲಿ ಅಳವಡಿಸಬೇಕು. ಈಗಾಗಲೇ ಸಾರ್ವಜನಿಕರು ಈ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರು ಸಲ್ಲಿಸುತ್ತಿದ್ದಾರೆ. ಕಡತ ರವಾನೆ ಮಾಡಲು ಎಷ್ಟು ಹಣ ಕೊಡಬೇಕು’ ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ, ‘ಅದಕ್ಕೆಲ್ಲಾ ಹಣ ಫಿಕ್ಸ್ ಮಾಡಿದ್ದೀರಿ ಎಂಬುದು ಗೊತ್ತಿದೆ. ನಾನು ಹೇಳದಿದ್ದರೂ, ಜನ ಹೇಳುತ್ತಾರೆ. ಎಷ್ಟು ಕೊಡಬೇಕು ಎಂಬುದರಲ್ಲೂ ಪಾರದರ್ಶಕತೆ ತಂದು ಬಿಡಿ’ ಎಂದು ಅಧಿಕಾರಿಗಳ ಬೆವರಿಳಿಸಿದರು.

ಪ್ರತಿದಿನ ಎಷ್ಟು ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಬೇರೆ ತಾಲ್ಲೂಕುಗಳಿಗಿಂತ ಕಡಿಮೆ ಪ್ರಮಾಣದ ದಾಖಲೆಗಳನ್ನು ಈ ಕಚೇರಿಯಲ್ಲಿ ಮಾಡಲಾಗುತ್ತಿದೆ. ಸ್ಕ್ಯಾನ್ ಆಗಿರುವ ದಾಖಲೆಗಳನ್ನು ತೋರಿಸಿ ಎಂದು ಸಿಬ್ಬಂದಿಯನ್ನು ಸಚಿವರು ಕೇಳಿದರು. ಆಗ ಸಿಬ್ಬಂದಿ ವಿಚಲಿತರಾದರು. ಆಗ ‘ತಮಗೆ ಯಾವ ಕೆಲಸವನ್ನು ನೀಡಲಾಗಿದೆ’ ಎಂದು ಇಲ್ಲಿನ ಸಿಬ್ಬಂದಿಗಳಿಗೆ ತಿಳಿದಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಾಜರಾತಿ ಪುಸ್ತಕ ಪರಿಶೀಲನೆ: ಕಚೇರಿಯಲ್ಲಿ ಇಟ್ಟಿರುವ ಹಾಜರಾತಿ ಪುಸ್ತಕವನ್ನು ಮತ್ತು ಮೂವ್‍ಮೆಂಟ್ ದಾಖಲಾತಿ ಪುಸ್ತಕವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದರು. ಸಮರ್ಪಕವಾಗಿ ಅವುಗಳನ್ನು ನಿರ್ವಹಿಸದ ಕಾರಣ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿದರು. ಬೆಂಗಳೂರು ದಕ್ಷಿಣ ತಾಲೂಕು ಆಫೀಸ್ ವಲ್ರ್ಡ್ ಫೇಮಸ್ ಆಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News