ಸ್ವೀಡನ್, ಡೆನ್ಮಾರ್ಕ್ ಉದ್ಯಮಗಳ ಜೊತೆ ಕರ್ನಾಟಕದ ವಾಣಿಜ್ಯ ಬಾಂಧವ್ಯ ವೃದ್ಧಿ : ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ‘ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ನವೀಕರಿಸಬಹುದಾದ ಇಂಧನ ಹೂಡಿಕೆಯ ಜಾಗತಿಕ ಪ್ರಮುಖ ಕಂಪೆನಿಯಾಗಿರುವ ಕೋಪನ್‍ಹೆಗನ್ ಇನ್‍ಫ್ರಾಸ್ಟ್ರಕ್ಷರ್ ಪಾರ್ಟನರ್ಸ್ (ಸಿಐಪಿ) ಒಲವು ವ್ಯಕ್ತಪಡಿಸಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.
ಗುರುವಾರ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಡೆನ್ಮಾರ್ಕ್‍ಗೆ ಭೇಟಿ ನೀಡಿರುವ ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆಗಿನ ಭೇಟಿ ಸಂದರ್ಭದಲ್ಲಿ ‘ಸಿಐಪಿ’-ಯು ಈ ಮಾಹಿತಿ ಹಂಚಿಕೊಂಡಿದೆ. ‘ಭಾರತಕ್ಕೆ ಸಂಬಂಧಿಸಿದ ತನ್ನ ಬಂಡವಾಳ ಹೂಡಿಕೆ ಕಾರ್ಯತಂತ್ರದಲ್ಲಿ ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 300 ಮೆಗಾವಾಟ್ ಸಾಮಥ್ರ್ಯದ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಆಂಪಿನ್ ಸಹಯೋಗದಲ್ಲಿನ ಎರಡು ಪವನ ವಿದ್ಯುತ್ ಉತ್ಪಾದನೆ ಯೋಜನೆಗಳ ಅನುಷ್ಠಾನದಲ್ಲಿನ ಪ್ರಗತಿಯನ್ನು ‘ಸಿಐಪಿ’ ಹಂಚಿಕೊಂಡಿತು.
‘ಸಿಐಪಿ-ನ ಈ ನಿಲುವು, ಭಾರತದಲ್ಲಿನ ಪವನ ವಿದ್ಯುತ್ ಮಾರುಕಟ್ಟೆಯಲ್ಲಿ ಕರ್ನಾಟಕವು ಅತಿದೊಡ್ಡ ಪಾಲು ಹೊಂದಿರುವುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ‘ಸಿಐಪಿ’ನ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿವಿಧ ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಬಂಡವಾಳ ಹೂಡಿಕೆಗೆ ಕರ್ನಾಟಕವು ಆದ್ಯತೆಯ ತಾಣವಾಗಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸ್ವೀಡನ್ ಹಾಗೂ ಡೆನ್ಮಾರ್ಕ್‍ಗಳಲ್ಲಿ ನಡೆಸಿದ ರೋಡ್ ಷೋಗಳಲ್ಲಿ ಅಲ್ಲಿನ ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭದ್ರಯ್ಯ ನಿಯೋಗದಲ್ಲಿ ಇದ್ದಾರೆ.