×
Ad

ಅಪಾರ್ಟ್‍ಮೆಂಟ್ ಸಹಕಾರಿ ಸಂಘ ರಚನೆಗೆ ನಕಾರ: ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆರೋಪ

Update: 2025-06-21 22:42 IST

ಬೆಂಗಳೂರು : ಸ್ಥಳೀಯ ಕಾನೂನುಗಳನ್ನು ಪಾಲಿಸುವ ನೆಪದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಪಾಲಿಸದೇ ರಾಜ್ಯದಲ್ಲಿ ಅಪಾರ್ಟ್‍ಮೆಂಟ್‍ಗಳ ಸಹಕಾರಿ ಸಂಘವನ್ನು ರಚಿಸುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅಪಾರ್ಟ್‍ಮೆಂಟ್ ಸಹಕಾರಿ ಸಂಘ ಆರೋಪ ಮಾಡಿದೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪರಶುರಾಮ್, ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಪ್ರಜೆಗಳ ಮೂಲಭೂತ ಹಕ್ಕಾಗಿದೆ. ಈ ಹಕ್ಕಿನ ಅಡಿಯಲ್ಲಿ ಅಪಾರ್ಟ್‍ಮೆಂಟ್ ಸಮೂಹದ ನಿರ್ವಹಣೆಗಾಗಿ ಅಪಾರ್ಟ್‍ಮೆಂಟ್ ಮಾಲಕರು ನಗರದಲ್ಲಿ ಸುಮಾರು 50 ಅಪಾರ್ಟ್‍ಮೆಂಟ್ ಮಾಲಕರ ಕೋಆಪರೇಟಿವ್ ಸೊಸೈಟಿಗಳನ್ನು ಕಾನೂನು ಬದ್ದವಾಗಿ ನೋಂದಾಯಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಆದರೆ, ಈ ಸಹಕಾರಿ ಸಂಘಗಳಿಗೆ ಅಪಾರ್ಟ್‍ಮೆಂಟ್ ಸಮೂಹದ ಮೂಲ ಭೂಮಿ, ಕಾಮನ್ ಸ್ಪೇಸ್ ಹಾಗೂ ಮೂಲಸೌಕರ್ಯಗಳನ್ನು ಹಸ್ತಾಂತರಿಸುವ ಅನಿವಾರ್ಯತೆ ಬಿಲ್ಡರ್‍ಗಳಿಗೆ ಉಂಟಾಗಿರುವುದರಿಂದ ಅವರು ಹೈಕೋರ್ಟ್‍ಗೆ ಅಹವಾಲು ಸಲ್ಲಿಸಿ, ರಾಜಕೀಯ ಪ್ರಭಾವ ಬಳಿಸಿಕೊಂಡು ಅಪಾರ್ಟ್‍ಮೆಂಟ್ ಮಾಲಕರ ಕೊಆಪರೇಟಿವ್ ಸೊಸೈಟಿಗಳನ್ನು ಅಮಾನ್ಯ ಮಾಡುವ ಆದೇಶವನ್ನು ಹೈಕೋರ್ಟ್‍ನಿಂದ ಪಡೆದಿದ್ದಾರೆ. ಈ ಆದೇಶವು ಸಂವಿಧಾನದತ್ತ ಮೂಲಭೂತ ಹಕ್ಕಿಗೆ ಚ್ಯುತಿತರುವುದಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನ ಹಲವು ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.

ಬಿಲ್ಡರ್‍ಗಳು ಅಪಾರ್ಟ್‍ಮೆಂಟ್ ಮಾಲಕರಿಗೆ ಭೂಮಿಯ ದಾಖಲೆಗಳನ್ನು ಸರಿಯಾಗಿ ಹಸ್ತಾಂತರಿಸದೇ, ಭೂಮಿಯನ್ನು ಉಳಿಸಿಕೊಳ್ಳಲು ಬಯಸುವ ಅನೇಕ ಮಾಲಕರುಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ. ರಾಜ್ಯ ಸರಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಿ ಮಧ್ಯಮ ವರ್ಗದ ಜನರ ಹಕ್ಕನ್ನು ಕಾಪಾಡಬೇಕು. ಅಪಾರ್ಟ್‍ಮೆಂಟ್ ಭೂಮಿಗಳನ್ನು ಮಾಲಕರಲ್ಲದ ಬಿಲ್ಡರಗಳು ಅಡವಿಡುವ ವ್ಯವಸ್ಥೆಯನ್ನು ನಿಲ್ಲಿಸಬೇಕು ಮತ್ತು ಭೂಮಿಯ ಮಾಲಕತ್ವದ ಹಕ್ಕನ್ನು ಅಪಾರ್ಟ್‍ಮೆಂಟ್ ಮಾಲಕರಿಗೆ ಉಳಿಸಿಕೊಡಬೇಕು ಎಂದು ಪರಶುರಮ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಪಾದ, ಖಜಾಂಚಿ ರಮ್ಯಾ ರಾವ್, ಕಾರ್ಯದರ್ಶಿ ವಿದ್ಯಾಧರ ದುರ್ಗೇಕರ್, ಗಂಗಾಧರ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News