×
Ad

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಹೋರಾಟ ನಿರಂತರವಾಗಲಿ : ದಿನೇಶ್ ಅಮೀನ್ ಮಟ್ಟು

Update: 2025-06-21 23:53 IST

ಬೆಂಗಳೂರು : ಯಾವ ಪ್ರಭುತ್ವವು ಯಾವುದೇ ಕಾಲದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸುವುದಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನಿವಾರ್ಯ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದ್ದು, ಇದರ ವಿರುದ್ಧ ಹೋರಾಟ ನಿರಂತರವಾಗಿರಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ತಿಳಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ನಡೆದ ಪ್ರಬೀರ್ ಪುರಕಾಯಸ್ತ ಅವರ ‘ಆರದ ಹೋರಾಟದ ಕಿಚ್ಚು’ ಪುಸ್ತಕದ ಕನ್ನಡಾನುವಾದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಜನಜಾಗೃತಿಯ ಕುಲುಮೆ ಇಂದಿಗೂ ಉರಿಯುತ್ತಿದ್ದರೆ ಅದಕ್ಕೆ ಪ್ರಬೀರ್ ಪುರಕಾಯಸ್ತರ ಕಿಚ್ಚು ಕೂಡ ಕಾರಣ ಎಂದರು.

ಯಾವ ದೇಶ ಯಾವ ಕಾಲದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇವತ್ತಿನ ಪ್ರಭುತ್ವನ್ನು ಸಹಿಸುವುದಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರದ ಕಾಲದ ಪ್ರಭುತ್ವವೂ ಸಹಿಸಿಲ್ಲ. ಈ ದೇಶದ ಪ್ರಜಾಪ್ರಭುತ್ವದ ಬಲವರ್ಧನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ಪರಿಸ್ಥಿತಿಯಲ್ಲಿ ನಮ್ಮ ನಡುವಿನ ಹೋರಾಟಗಾರರು, ಚಿಂತಕರು, ಬುದ್ಧಿಜೀವಿಗಳಿರುವ ಬಹಳ ದೊಡ್ಡ ಸವಾಲೆಂದರೆ ವಿದ್ಯಾವಂತರಿಗೆ ಬುದ್ಧಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು. ಹಿಂದಿನ ತಲೆಮಾರಿನಲ್ಲಿ ಇಂತಹ ಸವಾಲು ಇರಲಿಲ್ಲ. ಹಿಂದೆ ಶಿಕ್ಷಣವನ್ನು ಕೊಟ್ಟರೆ ಸಾಕು ಜನರು ಶಿಕ್ಷಿತರಾಗುತ್ತಾರೆ, ಜಾಗೃತರಾಗುತ್ತಾರೆ ಎಂಬ ಭಾವನೆ ಇತ್ತು. ಆದರೆ ಇವತ್ತಿನ ಪರಿಸ್ಥಿತಿ ಬದಲಾಗಿದೆ. ಪೆಟ್ರೋಲ್ ಲೀಟರ್‍ಗೆ 500 ರೂ.ಗಳಾದರೂ ಮೋದಿಗೆ ಓಟು ಹಾಕುತ್ತೇವೆಂದು ಹೇಳುವ ವಿದ್ಯಾವಂತ ವರ್ಗದವರಿಗೆ ಬುದ್ಧಿ ಹೇಳಬೇಕಾದ ಪರಿಸ್ಥಿತಿಯಿದೆ ಎಂದು ದಿನೇಶ್ ಅಮೀನ್‍ಮಟ್ಟು ತಿಳಿಸಿದರು.

ಅಂಕಣಕಾರ ಎ.ನಾರಾಯಣ ಮಾತನಾಡಿ, ದೇಶದಲ್ಲಿ 50 ವರ್ಷಗಳ ಹಿಂದಿನ ಘೋಷಿತ ತುರ್ತು ಪರಿಸ್ಥಿತಿಯಿಂದ ಹಿಡಿದು ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿಯವರೆಗಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ‘ಆರದ ಹೋರಾಟದ ಕಿಚ್ಚು’ ಪುಸ್ತಕದಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ. ಈ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಗಾಂಭೀರ್ಯವನ್ನು ಕಟ್ಟಿಕೊಡುವ ರೀತಿ ಮನಮುಟ್ಟುವಂತಿದ್ದು, ಈ ಕಾಲದ ಓದುಗನಿಗೆ ಸರಳವಾಗಿ ಅರ್ಥವಾಗಲಿದೆ. ಇವತ್ತಿನ ತಲೆಮಾರಿಗೆ ತುರ್ತು ಪರಿಸ್ಥಿತಿಯನ್ನು ತಿಳಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ಇಂಗ್ಲಿಷ್ ಕಾದಂಬರಿಗಾರ್ತಿ ಗೀತಾ ಹರಿಹರನ್, ವಿಮರ್ಶಕ ರಾಜೇಂದ್ರ ಚೆನ್ನಿ, ಪುಸ್ತಕದ ಲೇಖಕ ಪ್ರಬೀರ್ ಪುರಕಾಯಸ್ತ, ಪುಸ್ತಕದ ಕನ್ನಡಾನುವಾದಕ ಸದಾನಂದ ಆರ್., ಕ್ರಿಯಾ ಮಾಧ್ಯಮದ ಕೆ.ಎಸ್.ವಿಮಲಾ ಮಾತನಾಡಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News