ಬೆಂಗಳೂರು | ವೃದ್ದಾಶ್ರಮದಲ್ಲಿ ದಂಪತಿ ಆತ್ಮಹತ್ಯೆ
ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ವೃದ್ದಾಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣಮೂರ್ತಿ (81) ಹಾಗೂ ಇವರ ಪತ್ನಿ ರಾಧಾ(74) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಪುತ್ರ ವಿಜಯ್ ಎಂಬುವರು ನೀಡಿದ ದೂರು ಆಧರಿಸಿ ತಲಘಟ್ಟಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ: ಜೂನ್ 23ರಂದು ಆಶ್ರಮದಲ್ಲಿ ಟಿ.ವಿ. ನೋಡುವ ವಿಚಾರಕ್ಕೆ ದಂಪತಿಯ ನಡುವೆ ಮನಸ್ತಾಪವಾಗಿದೆ. ಕೆಲ ಸಮಯದ ಬಳಿಕ ಇಬ್ಬರೂ ಒಟ್ಟಿಗೆ ಊಟ ಮಾಡಿ ಕೊಠಡಿಗೆ ತೆರಳಿದ್ದರು. ಜೂ.24ರ ಮಂಗಳವಾರ ಬೆಳಗ್ಗೆ ಬಂದು ನೋಡಿದಾಗ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.