‘ಒಳಮೀಸಲಾತಿ ಸಮೀಕ್ಷೆ’ಯಲ್ಲಿ ಪಾಲ್ಗೊಂಡ ಆಶಾ ಕಾರ್ಯಕರ್ತೆಯರಿಗೆ ಭತ್ಯೆ ಪಾವತಿಸಲು ಆಗ್ರಹಿಸಿ ಧರಣಿ
ಬೆಂಗಳೂರು : ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕೆಲಸಕ್ಕೆ ಆಶಾ ಕಾರ್ಯಕರ್ತೆಯರಿಗೆ ನಿಗದಿಪಡಿಸಿರುವ ಭತ್ಯೆಯನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಉಪಾಧ್ಯಕ್ಷೆ ರಮಾ ಟಿ.ಸಿ., ಬಿಬಿಎಂಪಿಯು ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಿದ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವಧನ ನೀಡಬೇಕು. ಸ್ವಯಂಪ್ರೇರಿತರಾಗಿ ಮುಂದೆ ಬರುವವರಿಂದ ಸರ್ವೇ ಮಾಡಿಸಬೇಕೇ ಹೊರತು ಒತ್ತಾಯಪೂರ್ವಕವಾಗಿ ಮಾಡಿಸಬಾರದು ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿರುವ ಪ್ರದೇಶ ಬಿಟ್ಟು ಬೇರೆ ಪ್ರದೇಶದಲ್ಲಿ ಸಮೀಕ್ಷೆ ಕೆಲಸಕ್ಕೆ ನಿಯೋಜಿಸಬಾರದು. ಸಮೀಕ್ಷೆ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಆರೋಗ್ಯ ಒಳಗೊಂಡಂತೆ ಯಾವುದೇ ತೊಂದರೆ ಉಂಟಾದರೂ ಸರಕಾರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದಿನ ಹೋರಾಟದ ಸಂದರ್ಭದಲ್ಲಿ ಸಿಎಂ ಆಶ್ವಾಸನೆ ನೀಡಿದಂತೆ ಎ. 1ರಿಂದಲೇ ಅನ್ವಯವಾಗುವಂತೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ರೂ. ಗೌರವಧನ ನೀಡಬೇಕು. ಎಲ್ಲ ಆಶಾ ಕಾರ್ಯಕರ್ತೆಯರಿಗೂ ತಂಡ ಆಧಾರಿತ (ಟೀಮ್ ಬೇಸ್ಡ್ ಇನ್‍ಸೆಂಟೀವ್) ಪ್ರೋ ತ್ಸಾಹಧನ ನೀಡಬೇಕು. ಜತೆಗೆ, ಇದುವರೆಗೂ ಬಾಕಿ ಉಳಿದಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ವಿಶೇಷ ಆಯುಕ್ತ ವಿಕಾಸ್ ಸುರಳ್ಕರ್ ಅವರಿಗೆ ಧರಣಿನಿರತರು ಮನವಿ ಸಲ್ಲಿಸಿದರು. ಧರಣಿಯಲ್ಲಿ ಹೋರಾಟಗಾರರಾದ ಮಮತಾ, ಗೌರಮ್ಮ, ಶ್ವೇತಾ, ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.