×
Ad

ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯದ ಮೇಲೆ ‘ಬ್ರ್ಯಾಂಡ್ ಬೆಂಗಳೂರು ನಿರ್ಮಾಣ’: ಡಿ.ಕೆ.ಶಿವಕುಮಾರ್

Update: 2025-06-27 23:07 IST

ಬೆಂಗಳೂರು : ಕೆಂಪೇಗೌಡ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ನಾವು ಬ್ರ್ಯಾಂಡ್ ಬೆಂಗಳೂರು ಮಾಡುವ ಪರಿಕಲ್ಪನೆ ಹೊಂದಿದ್ದೇವೆ. ನಾವೆಲ್ಲರೂ ಸೇರಿ, ಬಲಿಷ್ಠ ಬೆಂಗಳೂರು, ಶಾಂತಿಯ ಬೆಂಗಳೂರು, ಗ್ರೀನ್ ಬೆಂಗಳೂರು, ಸುರಕ್ಷಿತ ಬೆಂಗಳೂರು ನಿರ್ಮಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದಲ್ಲಿರುವ ಡಾ.ರಾಜಕುಮಾರ್ ಗಾಜಿನಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಕೆಂಪೇಗೌಡರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಅವರು ಎಲ್ಲ ವರ್ಗದವರಿಗೆ ಆದ್ಯತೆ ನೀಡಿ ಅನೇಕ ಪೇಟೆ ರಚಿಸಿದರು. ಇದು ಅವರ ದೂರದೃಷ್ಟಿಗೆ ಸಾಕ್ಷಿ. ರಾಜ್ಯ, ದೇಶ, ವಿದೇಶದ ಜನ ಈ ನಗರದಲ್ಲಿ ಈಗ ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರನ್ನು ಸ್ವಚ್ಛ ಮಾಡುವವರಿಂದ ಹಿಡಿದು ಈ ನಗರಕ್ಕೆ ಸೇವೆ ಸಲ್ಲಿಸಿದ ಅನೇಕ ಹಿರಿಯರಿಗೆ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಕಲೆ, ಮಾಧ್ಯಮ, ವೈದ್ಯಕೀಯ, ವಿಜ್ಞಾನ, ಕೈಗಾರಿಕೆ ಸೇರಿದಂತೆ ಎಲ್ಲ ರಂಗದ ಸಾಧಕರಿಗೆ ಈ ಪ್ರಶಸ್ತಿ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಂದಕುಮಾರ್, ಬಿ.ಎಸ್.ಪಾಟೀಲ್, ಜೈಕಾರ್ ಜರೋಮೆ, ವಿ. ರವಿಚಂದರ್, ಉಮಾಶಂಕರ್ ಎಸ್.ಆರ್., ಆರ್.ಕೆ. ಮಿಶ್ರಾ, ಕೆ.ಎಂ. ನಾಗರಾಜು, ಮಹೇಶ್ ಭೂಪತಿ, ಸಂಗೀತ ಕಟ್ಟಿ, ಎಂಎಸ್. ಶ್ಯಾಮ್ ಸುಂದರ್, ಎಂ.ಜಿ.ರಾಜಗೋಪಾಲ್, ಡಾ. ಎಚ್.ಎಂ. ವೆಂಕಟಪ್ಪ, ದೀಪಕ್ ತಿಮ್ಮಯ್ಯ, ಬಿ.ಎಸ್. ಸತೀಶ್ ಕುಮಾರ್, ದಿನೇಶ್ ವರ್ಮಾ, ಹರ್ಷವರ್ಧನ ಎಚ್.ಎನ್., ವಿ.ಎಸ್. ಪ್ಯಾಟ್ರಿಕ್ ರಾಜು, ವೈ.ಕೆ. ಬೇನೂರ, ಭಾವನ ನಾಗಯ್ಯ, ಅರುಣ್ ಪೈ, ಮಾರಸಪ್ಪ ರವಿ, ದಯಾನಂದ್ ಎಸ್.ಪಿ., ಕಲ್ಪನಾ ಶಿವಣ್ಣ, ಎಸ್.ಪಿ. ಚಂದ್ರಶೇಖರ್ ರಾಜು, ಅತೀಕ್ ಅಹಮದ್ ಬೇಗ್, ಟಿ.ಎಸ್. ಲೂಕಸ್, ಪದ್ಮಶ್ರೀ ಬಲರಾಮ್, ಎಂ. ಚಂದ್ರರೆಡ್ಡಿ, ಎ. ಆರೋಗ್ಯಪ್ಪ, ಡಾ. ಗೌರಿ ಸುಬ್ರಮಣ್ಯ, ವಿದ್ವಾನ್ ಆರ್.ಕೆ. ಶಂಕರ್, ಎಚ್. ತಿಮ್ಮರಾಜ್ ಆರ್ಸ್, ರಾಜೇಶ್ ಚಟ್ಲ, ಸಿ, ಮಹೇಶ್, ಧನುಷ್ ಎಂ., ಎಂ. ಅಭಿಮನ್ಯು, ವೈನವಿ ಬಿ.ಸಿ., ರಾಧಿಕಾ ಸ್ವಾಮಿ, ಬಿ. ರವಿಗೌಡ, ಎಲ್. ರೇಖಾ, ಎಂ. ದ್ಯಾಮಣ್ಣ ಶಾಸ್ತ್ರಿ, ಡಾ. ಬಿ.ಪಿ. ಆರಾಧ್ಯ, ಡಾ. ವೆಂಕಟ್, ಕೆ.ಎ. ಶಂಕರ್, ಜಿ.ವಿ. ಪ್ರಸನ್ನ, ಡಾ. ಸಿ. ಶಿವರಾಜು, ಬಿ.ಎಂ. ಶಿವರುದ್ರಯ್ಯ, ಎಚ್.ಡಿ. ದರ್ಶನ್, ಅವಿರಾಜ್ ಎಂ., ನಂದಿತಾ ಎಸ್. ರಾವ್, ಸಂಗೀತಾ ಎಸ್ ಎನ್ ದೇವರಾಜ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೆಯೇ 51 ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೌಕರರಿಗೆ ಉತ್ತಮ ನೌಕರರ ಪ್ರಶಸ್ತಿಯನ್ನು ನೀಡಲಾಯಿತು.

ಇದೇ ವೇಳೆ ಸಚಿವ ರಾಮಲಿಂಗಾ ರೆಡ್ಡಿ, ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತ ನವೀನ್ ಕುಮಾರ್, ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರಿಸ್, ಶಾಸಕರಾದ ಜಿ.ಎಸ್ ಪಾಟೀಲ್, ಅಶೋಕ್ ಕುಮಾರ್ ರೈ, ಎಂಎಲ್‍ಸಿ ಟಿ.ಎ. ಶರವಣ, ಉಪಮುಖ್ಯಮಂತ್ರಿಗಳ ಆಪ್ತ ಸಹಾಯಕ ರಾಜೇಂದ್ರ ಪ್ರಸಾದ್, ಬಿಎಂಆರ್‍ಡಿಎ ಅಧ್ಯಕ್ಷ ರಾಜೇಂದ್ರ ಚೋಳನ್, ಕರವೇ ಅಧ್ಯಕ್ಷ ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News