ಬೆಂಗಳೂರಿನಲ್ಲಿ ವಿಷಪ್ರಾಶನದಿಂದ ಐದು ನಾಯಿಗಳ ಸಾವು: ವರದಿ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಇಲ್ಲಿನ ಕೆ.ಆರ್.ಪುರಂನ ಭಟ್ಟರಹಳ್ಳಿಯಲ್ಲಿ ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಷ ಆಹಾರ ನೀಡಿರುವುದರಿಂದ ನಾಯಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಭಟ್ಟರಹಳ್ಳಿಯ ಗಾರ್ಡನ್ ಅವೆನ್ಯೂ ಬಡಾವಣೆಯ ಒಂದನೇ ಅಡ್ಡರಸ್ತೆಯ ಬೀದಿಯಲ್ಲಿ 10-12 ಬೀದಿ ನಾಯಿಗಳಿದ್ದು, ಜೂ.18ರಂದು ಐದು ಬೀದಿನಾಯಿಗಳು ರಕ್ತವಾಂತಿಯಿಂದ ಸ್ಥಳದಲ್ಲಿಯೇ ಮೃತಪಟ್ಟಿವೆ. ಉದ್ದೇಶಪೂರ್ವಕವಾಗಿಯೇ ನಾಯಿಗಳಿಗೆ ವಿಷಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಆರು ನಾಯಿಗಳು ಮನೆಯ ಮುಂದೆ ಆಟವಾಡುತ್ತಿದ್ದವು. ಈ ವೇಳೆ ಇದ್ದಕ್ಕಿದ್ದಂತೆ ನಾಯಿಗಳು ಅಸ್ವಸ್ಥಗೊಂಡಿವೆ. ಸ್ಥಳೀಯರು ಅವುಗಳನ್ನು ಗಮನಿಸಿ, ಕೂಡಲೇ ನೀರು ಕುಡಿಸಿದ್ದರಿಂದ ಒಂದು ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ಐದು ನಾಯಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಬೀದಿ ನಾಯಿಗಳ ಸಾವಿಗೆ ಕಾರಣ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಾಯಿಗಳ ರಕ್ತದ ಮಾದರಿ ರವಾನೆ ಮಾಡಲಾಗಿದ್ದು, ಈ ಬೀದಿನಾಯಿಗಳಿಗೆ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.