×
Ad

ಭದ್ರಾ ಬಲದಂಡೆ ನಾಲೆ ಸೀಳುವ ಕಾಮಗಾರಿಗೆ ವಿರೋಧ | ಬಿಜೆಪಿ, ರೈತರ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Update: 2025-06-29 00:22 IST

ದಾವಣಗೆರೆ : ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಮುಂದಾಗಿರುವ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ, ಜಿಲ್ಲಾ ಬಿಜೆಪಿ ಮತ್ತು ಜಿಲ್ಲಾ ರೈತರ ಒಕ್ಕೂಟ ಶನಿವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ್ ನೇತೃತ್ವದಲ್ಲಿ ಬೀದಿಗೆ ಇಳಿದ ಬಿಜೆಪಿ ಮತ್ತು ರೈತರ ಒಕ್ಕೂಟದ ಕಾರ್ಯಕರ್ತರು ನಗರದ ಹದಡಿ ರಸ್ತೆಯ ಐಟಿಐ ಕಾಲೇಜು ವೃತ್ತ, ಶಾಮನೂರು ರಸ್ತೆ ಸೇರಿ ನಾಲ್ಕೈದು ಕಡೆ ಪೊಲೀಸರ ವಿರೋಧದ ಮಧ್ಯೆಯೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಬಾಗಿಲು ತೆರೆದಿದ್ದ ಅಂಗಡಿ, ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದರು.

ಎಂದಿನಂತೆ ರಸ್ತೆಗಿಳಿದ ಆಟೊ, ಬಸ್‌ಗಳ ಚಾಲಕರನ್ನು ತರಾಟೆಗೆ ತೆಗೆದುಕೊಂಡು ಸಂಚಾರ ನಿಲ್ಲಿಸುವಂತೆ ತಾಕೀತು ಮಾಡುತ್ತಿದ್ದ ದೃಶ್ಯವೂ ಕಂಡು ಬಂತು.

ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ ವಾಹನ ಸಂಚಾರ ವಿರಳವಿತ್ತಾದರೂ 10 ಗಂಟೆ ಬಳಿಕ ಎಂದಿನಂತೆ ಆಟೊ, ಬಸ್ ಸಂಚಾರ ಸಾಮಾನ್ಯವಾಗಿದ್ದರಿಂದ ಪರಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಈ ಮಧ್ಯೆಯು ವಾಹನಗಳ ಸಂಚಾರ ನಿಲ್ಲಿಸುವಂತೆ ತಾಕೀತು ಮಾಡುತ್ತಿದ್ದ ಪ್ರತಿಭಟನಾಕಾರರಿಂದ ಆಟೊ, ಬಸ್ ಸೇರಿ ಇತರ ವಾಹನ ಚಾಲಕರನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಕಳುಹಿಸಿದರು.

ಬೆಳಗ್ಗೆ 11:30ರ ನಂತರ ಬೈಕ್ ರ್ಯಾಲಿ ಮೂಲಕ ನಗರದ ಹಲವೆಡೆ ಸಂಚರಿಸಿದ ಪ್ರತಿಭಟನಾಕಾರರು ಬಂದ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಕಾಯಿ ಪೇಟೆ, ಕೆ.ಆರ್. ಮಾರುಕಟ್ಟೆ, ಚಾಮರಾಜ ಪೇಟೆ ಸೇರಿ ಹಳೇ ಭಾಗದ ಕೆಲ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ, ಬಂದ್‌ಗೆ ಬೆಂಬಲ ಸೂಚಿಸಿದರೆ, ಇನ್ನು ಕೆಲ ವರ್ತಕರು ಎಂದಿನಂತೆ ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. ಇನ್ನು ಹೊಸ ಭಾಗದ ಜಯದೇವ ವೃತ್ತ, ಗಾಂಧಿ ವೃತ್ತ, ಕೆಇಬಿ ವೃತ್ತ, ಅಕ್ಕಮಹಾದೇವಿ (ಎವಿಕೆ) ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ಬಂದ್ ತೀವ್ರತೆ ಹೆಚ್ಚಿತ್ತು. ಈ ಪ್ರದೇಶಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಜನಜೀವನ ಸಹಜವಾಗಿತ್ತು. ಶಾಲಾ-ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, 4ನೇ ಶನಿವಾರ ಹಿನ್ನೆಲೆಯಲ್ಲಿ ಬ್ಯಾಂಕ್, ಸರಕಾರಿ ಕಚೇರಿಗಳಿಗೆ ರಜೆ ಇತ್ತು.

ಬಂದ್ ಆಚರಣೆ ನೇತೃತ್ವವನ್ನು ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರುಗಳಾದ ಕೊಳೆನಹಳ್ಳಿ ಬಿ.ಎಂ. ಸತೀಶ್, ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ್, ಚಂದ್ರಶೇಖರ್ ಪೂಜಾರ್, ಧನಂಜಯ ಕಡ್ಲೇಬಾಳ್, ಅನಿಲಕುಮಾರ ನಾಯ್ಕ, ಎಚ್.ಪಿ. ವಿಶ್ವಾಸ್, ಎನ್.ಎಚ್. ಹಾಲೇಶ್‌ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News