×
Ad

ಭೂ ಸ್ವಾಧೀನ ಕೈಬಿಡಲು ಕಾನೂನು ಸಲಹೆಗೆ ನನ್ನ ಬಳಿ ಬನ್ನಿ : ನ್ಯಾ.ವಿ.ಗೋಪಾಲಗೌಡ

Update: 2025-07-04 23:15 IST

                             ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಭೂ ಸತ್ಯಾಗ್ರಹ ಹೋರಾಟ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರೈತರ ಸಭೆಯಲ್ಲಿ ಭೂಸ್ವಾಧೀನ ಕೈಬಿಡಲು ಕಾನೂನು ತೊಡಕಿದೆ ಎಂದು ಹೇಳಿ ಕಳುಹಿಸಿದ್ದೀರಿ. ನನ್ನ ಬಳಿ ಬನ್ನಿ, ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು, ನೀವು ನಾಳೆಯೇ ಡಿನೋಟಿಫಿಕೇಷನ್ ಮಾಡುವಂತಹ ರೀತಿಯಲ್ಲಿ ಕಾನೂನು ಸಲಹೆಗಳನ್ನು ನಾನೇ ಬರೆದು ಕೊಡುತ್ತೇನೆ ಎಂದು ನಿವೃತ್ತ ನಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಭೂ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ರೈತರ ಮತಗಳಿಂದ ನೀವು ಶಾಸಕ, ಸಚಿವರು, ಮುಖ್ಯಮಂತ್ರಿ ಆಗದ್ದೀರಿ. ಸಂವಿಧಾನದ ಅಡಿಯಲ್ಲಿ ಪ್ರಮಾಣ ಪತ್ರ ಓದಿ, ಅಧಿಕಾರ ಸ್ವೀಕರಿಸಿದ್ದೀರಿ, ನಾವು ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತೇವೆಂದು ಹೇಳಿ, ಈಗ ನೀವು ಯಾಕೆ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಕೃಷಿ ಭೂಮಿಯನ್ನು ಕೈಗಾರಿಕ ಪ್ರದೇಶ ಎಂದು ಘೋಷಿಸಬಾರದು, ಅದು ಕಾನೂನು ಬಾಹಿರ. ಭೂಸ್ವಾಧೀನ ಮಾಡಬೇಕೆಂದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳು ನಡೆಯಬೇಕು. ಆದರೆ ಇದು ನಡೆದಿಲ್ಲ. ಇದು ಸಂವಿಧಾನ ವಿರೋಧಿ ನಡೆ. ಪ್ರಾಥಮಿಕ ಅಧಿಸೂಚನೆಯಿಂದ ಹಿಡಿದು ಅಂತಿಮ ಅಧಿಸೂಚನೆ ಹೊರಡಿಸುವವರೆಗೂ ಸರಕಾರ ಮಾಡಿದ್ದೆಲ್ಲವೂ ಕಾನೂನು ಬಾಹಿರವಾಗಿದೆ. ಆದುದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ನ್ಯಾ.ವಿ.ಗೋಪಾಲಗೌಡ ಒತ್ತಾಯಿಸಿದರು.

ಕಾನೂನಿನಲ್ಲಿ ಕ್ಲಿಷ್ಟಕರವಾದ ಸಮಸ್ಯೆಗಳಿವೆ ಎಂದು ಹೇಳಿ ಸಿದ್ದರಾಮಯ್ಯನವರು ರೈತರಿಗೆ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಸಿದ್ದರಾಮಯ್ಯನವರೇ, ಡಿನೋಟಿಫೈ ಹೇಗೆ ಮಾಡಬೇಕೆಂದು ನಾವು ಹೇಳುತ್ತೇವೆ. ಕಾನೂನು ಸಲಹೆಗಳನ್ನು ನಾವು ನೀಡುತ್ತೇವೆ. ನಾಳೆಯೇ ನೀವು ಡಿನೋಟಿಫಿಕೇಷನ್ ಮಾಡಿ. ಕಾನೂನಿನ ಸಮಸ್ಯೆ ಇದೆ ಎಂದು ನೀವು ಹೇಳುವುದಾದರೆ, ಸರಕಾರ ರೈತರ ಕ್ಷೇಮವನ್ನು ಅರಿತುಕೊಂಡು, ನೋಟಿಫಿಕೇಷನ್ ಕೈ ಬಿಡಬೇಕು. ಅದಕ್ಕೆ ನಾವೇ ಕರಡು ಮಾಡಿಕೊಡುತ್ತೇವೆ. ಸಿದ್ದರಾಮಯ್ಯನವರೇ ನೀವು ಜನರಿಗೆ ದಿಟ್ಟವಾದ ಉತ್ತರ ಕೊಡಬೇಕು ಎಂದು ನ್ಯಾ.ವಿ.ಗೋಪಾಲಗೌಡ ಆಗ್ರಹಿಸಿದರು.

5 ವರ್ಷ ಸಿಎಂ ಆಗಿ ಪೂರೈಸಲು ಸಾಧ್ಯವಿಲ್ಲ: ರಾಜ್ಯದಲ್ಲಿ ಕೋಮುವಾದಿ ಪಕ್ಷಗಳು ಬರಬಾರದೆಂದೇ ಇಲ್ಲಿನ ರೈತರು, ಕಾರ್ಮಿಕರು, ಮಹಿಳೆಯರು ನಿಮ್ಮನ್ನು ಅಧಿಕಾರಕ್ಕೆ ತಂದಿರುವುದು, ಇದೀಗ ಅವರ ವಿರುದ್ಧ ತೀರ್ಮಾನ ತೆಗೆದುಕೊಂಡರೆ, ಸಿದ್ದರಾಮಯ್ಯನವರು ಸಂಪೂರ್ಣವಾಗಿ 5 ವರ್ಷ ಮುಖ್ಯಮಂತ್ರಿಯಾಗಿ ಪೂರೈಸಲು ಸಾಧ್ಯವಿಲ್ಲ. ಎಡಪಂಥಿಯ ಸಂಘಟನೆಗಳ ಮತ್ತು ರೈತ ಸಂಘಟನೆಗಳ ಶಕ್ತಿ ಕುಗ್ಗುತ್ತಿದೆ ಎಂದು ಸರಕಾರ ತಿಳಿದುಕೊಂಡರೆ ತಪ್ಪು ತಿಳುವಳಿಕೆ. ದೇಶದಲ್ಲಿ ಮಹಿಳೆಯರ ಮೇಲೆ, ರೈತರ ಮೇಲೆ, ಕಾರ್ಮಿಕರ ಮೇಲೆ ನಡೆಯುತ್ತಿರುವ ಅನ್ಯಾಯ, ಅಧರ್ಮದ ವಿರುದ್ಧ ಹೋರಾಟ ಮಾಡುತ್ತಿರುವ ಕೋಟ್ಯಂತರ ಜನರಿದ್ದಾರೆ ಎಂದು ನ್ಯಾ.ವಿ.ಗೋಪಾಲಗೌಡ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News