×
Ad

ಪಕ್ಷ ಏನು ಕೊಟ್ಟಿದೆ ಎನ್ನುವುದಕ್ಕಿಂತ ಮಾತನಾಡಲು ಧ್ವನಿ ಶಕ್ತಿ ನೀಡಿರುವುದೇ ಮುಖ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-07-11 15:57 IST

ಬೆಂಗಳೂರು, ಜು.11: “ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವ, ಪಂಚಾಯಿತಿ ಸದಸ್ಯ, ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಯುತ ಸ್ಥಾನ ಬೇಕು ಎಂದು ಪಕ್ಷ ಸೇರುವುದು ಮುಖ್ಯವಲ್ಲ. ಈ ಪಕ್ಷಕ್ಕಾಗಿ ದುಡಿಯುವುದು ಮುಖ್ಯ. ಎಲ್ಲರಿಗೂ ಮಾತನಾಡುವ ದನಿ ಶಕ್ತಿ ನೀಡಿರುವುದೇ ಹೆಗ್ಗಳಿಕೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಭಾರತ್ ಜೋಡೋ ಭವನದಲ್ಲಿ ಶುಕ್ರವಾರ ನಡೆದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಭಾಗವಹಿಸಿ ಮಾತನಾಡುತ್ತಿದ್ದರು.

“ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಬೇರೆ ಪಕ್ಷದಲ್ಲಿ ಇಂತಹ ಕುರ್ಚಿ (ಅಧಿಕಾರ) ನೀಡಲು ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯಲ್ಲಿರುವ ಪಕ್ಷದ ನಾಯಕರಿಗೆ ಇಂತಹ ಸ್ಥಾನ ನೀಡಲು ಯಾವುದೇ ಪಕ್ಷದಲ್ಲಿ ಆಗುತ್ತಿರಲಿಲ್ಲ. ಕಾಂಗ್ರೆಸ್ ನಿಂದ ಮಾತ್ರ ಅದು ಸಾಧ್ಯ” ಎಂದರು.

“ಬಿ.ಟಿ.ಲಲಿತಾ ನಾಯಕ್ ಕವಿ ಮನಸ್ಸಿನ ಹೋರಾಟಗಾರ್ತಿ. ಅವರ ಬದುಕೇ ಒಂದು ಹೋರಾಟ. ಮಾಜಿ ಸಚಿವೆಯಾಗಿ, ಶಾಸಕರಾಗಿ ಅನೇಕ ಸಂಘಟನೆಗಳಲ್ಲಿ ದುಡಿದಿರುವವರು. ಹೋರಾಟ ಅನ್ನುವುದೇ ಲಲಿತಾ ನಾಯಕ್ ಅವರ ಬ್ರಾಂಡ್. ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಸೇರಿರುವ ಎಲ್ಲಾ ಮುಖಂಡರುಗಳಿಗೆ ತುಂಬು ಹೃದಯದ ಸ್ವಾಗತ” ಎಂದು ಹೇಳಿದರು.

“ನಾವು ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಮೊಣಕಾಲ್ಮೂರಿನ ಬಳಿ ಓರ್ವ ವೃದ್ಧೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಆಗ ಆ ಅಜ್ಜಿ ಒಂದು ಮಾತು ಹೇಳಿದರು. ಭೂಮಿಯಲ್ಲಿ ಬೆಳೆದಿರುವ ಸೌತೇಕಾಯಿ ಎಂದು ಹೇಳಿದರು. ಇಂತಹ ಕಾರ್ಯಕ್ರಮವನ್ನು ಬಿಜೆಪಿ, ಜನತಾದಳ ನೀಡಲಿಲ್ಲ. ಪಿಂಚಣಿಗಳು, ವಿದ್ಯೆ, ಆಸ್ಪತ್ರೆ, ಹಸಿದವರಿಗೆ ಅನ್ನ ಸೇರಿದಂತೆ ಬಡವರ ಬದುಕಿನಲ್ಲಿ ಬದಲಾವಣೆ ತಂದಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಮಾತ್ರ” ಎಂದರು.

 “ಈ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ಜಾತ್ಯಾತೀತ ತತ್ವ, ರಾಷ್ಟ್ರಧ್ವಜ ಹೀಗೆ ಈ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿರುವ ಕೆಲಸ ಮಾಡಿರುವುದು ಕಾಂಗ್ರೆಸ್ ಮಾತ್ರ. ಈ ಕೆಲಸವನ್ನು ಬಿಜೆಪಿ ಮಾಡಿದೆಯೇ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಣೆ ಮಾಡಿದ್ದೇವೆ. ಈ ಕ್ರಾಂತಿಕಾರಿ ಕೆಲಸವನ್ನು ಬಿಜೆಪಿ ಮಾಡಿದ್ದಾರೆಯೇ? ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಸಂವಿಧಾನ ರಕ್ಷಣೆಗೆ ನಾವು ಬೆಳಗಾವಿಯಲ್ಲಿ ಸಮಾವೇಶ ಮಾಡಿದ್ದೇವೆ. ಮಹಾತ್ಮ ಗಾಂಧಿ ಅವರು ಕುಳಿತಂತಹ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ”ಎಂದು ಹೇಳಿದರು.

“ಬೆಲೆ ಏರಿಕೆಯಿಂದ ತೊಂದರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇತ್ತು. ಯಾವುದನ್ನು ಮುಟ್ಟಿದರೂ ಬೆಲೆ ಏರಿಕೆ ಬಿಸಿ ಅನುಭವಿಸಬೇಕಿತ್ತು. ಅದಕ್ಕೆ ನಾವು ಸಂಸಾರ ಸುಗಮವಾಗಿ ಸಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಲಾಯಿತು” ಎಂದು ಹೇಳಿದರು.

“ಇಡೀ ರಾಜ್ಯದಾದ್ಯಂತ ನಾವು ನೀಡುತ್ತಿರುವ ಎಲ್ಲಾ ಯೋಜನೆಗಳನ್ನು ಲೆಕ್ಕ ಹಾಕಿದರೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಜನರ ಕಲ್ಯಾಣಕ್ಕೆ ಕಾಂಗ್ರೆಸ್ ನೀಡುತ್ತಿದೆ. ನಾವು ಜಾತಿ ಬಗ್ಗೆ ಚಿಂತನೆ ಮಾಡುವವರಲ್ಲ, ನೀತಿ ಬಗ್ಗೆ ಯೋಚನೆ ಮಾಡುವವರು. ಇಲ್ಲಿ ಇರುವ ಹೆಚ್ಚಿನ ಜನ ಹಿಂದುಗಳು. ನಾವು ಬಿಜೆಪಿಯವರಂತೆ ಹಿಂದು ಮಾತ್ರ ಮುಂದು ಎಂದು ಹೇಳುವುದಿಲ್ಲ. ಸಮಾಜದ ಎಲ್ಲಾ ಜಾತಿ, ವರ್ಗದವರು ಸೇರಿ ಒಂದು ಎನ್ನುವವರು. ನಾವು ಯಾವುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದವರಲ್ಲ” ಎಂದರು.

“ಸಂವಿಧಾನವನ್ನು ಒಂದಷ್ಟು ಜನ ದುರುಪಯೋಗ ಮಾಡಿಕೊಳ್ಳಬಹುದು ಆದರೆ ಅದು ತಾತ್ಕಾಲಿಕ. ಕಾಂಗ್ರೆಸ್ ಪಕ್ಷದ ಇರುವುದೇ ಸಂವಿಧಾನ ಹಾಗೂ ದೇಶದ ಜನರನ್ನು ರಕ್ಷಣೆ ಮಾಡಲು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News