ದೇವನಹಳ್ಳಿ ಬಲವಂತದ ಭೂಸ್ವಾಧೀನ ವಿಚಾರ | ಮಧ್ಯಪ್ರವೇಶಿಸಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಸಂಯುಕ್ತ ಹೋರಾಟ-ಕರ್ನಾಟಕ ಪತ್ರ
File Photo: PTI
ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಬಲವಂತದ ಭೂಸ್ವಾಧೀನ ವಿಚಾರದಲ್ಲಿ ರಾಜ್ಯ ಸರಕಾರ ರೈತರ ಪರವಾಗಿ ಧೃಡ ನಿಲುವು ತೆಗೆದುಕೊಳ್ಳಲು ಸಹಕಾರಿಯಾಗುವಂತೆ ಮಧ್ಯಪ್ರವೇಶ ಮಾಡಬೇಕೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಯುಕ್ತ ಹೋರಾಟ-ಕರ್ನಾಟಕ ಸಮಿತಿಯು ಸೋಮವಾರ ಪತ್ರ ಬರೆದಿದೆ.
ಬಲವಂತದ ಭೂಸ್ವಾಧೀನದ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗಮನದಲ್ಲಿದೆ. ಈ ಸಮಸ್ಯೆಯ ತೀರ್ಮಾನಕ್ಕೆ ಸರಕಾರ ಜತೆ ಜುಲೈ15ರಂದು ಎರಡನೇ ಸಭೆ ನಿಗದಿಯಾಗಿದೆ. ಏನೇ ಇರಲಿ ಜುಲೈ 15 ಕರ್ನಾಟಕ ಸರಕಾರಕ್ಕೆ ಅಗ್ನಿ ಪರೀಕ್ಷೆಯ ದಿನ. ದೇವನಹಳ್ಳಿ ವಿಚಾರ ಈಗ ಕೇವಲ 13 ಹಳ್ಳಿಗಳ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಅದು ಸರಕಾರ ಅಳವಡಿಸುತ್ತಿರುವ ಅಭಿವೃದ್ಧಿ ಮಾದರಿಯ ಬಗ್ಗೆ, ಬಿಜೆಪಿ ತಂದಿದ್ದ ನೀತಿಗಳನ್ನೇ ಕಾಂಗ್ರೆಸ್ ಸಹ ಮುಂದುವರೆಸುತ್ತಾ ಬಿಜೆಪಿ ಹಾದಿಯಲ್ಲೇ ನಡೆಯುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಮಾತುಗಳನ್ನು ಮರೆತೇ ಹೋಗಿರುವುದರ ಬಗ್ಗೆ, ಖುದ್ದು ಮುಖ್ಯಮಂತ್ರಿಗಳೇ ಕೊಟ್ಟ ಮಾತು ಮರೆತಿರುವ ಬಗ್ಗೆ, ಯುಪಿಎ ಸರಕಾರವೇ ತಂದಿದ್ದ 2013ರ ಭೂ ಸ್ವಾಧೀನ ಕಾಯ್ದೆಯ ನಿಬಂಧನೆಗಳ ಹಸಿಹಸಿ ಉಲ್ಲಂಘನೆಯನ್ನು ಕಾಂಗ್ರೆಸ್ ಸರಕಾರವೇ ಮಾಡುತ್ತಿರುವುದರ ಬಗ್ಗೆ, ರಾಜ್ಯ ಸರಕಾರ ತಪ್ಪು ಹಾದಿ ತುಳಿಯುತ್ತಿದ್ದರೂ ಅದನ್ನು ಸರಿಪಡಿಸುವಲ್ಲಿ ಹೈಕಮಾಂಡ್ ವಿಫಲಗೊಳ್ಳುತ್ತಿದೆ ಏಕೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ದೇವನಹಳ್ಳಿ ವಿಚಾರ ಪ್ರಾತಿನಿಧಿಕ ವಿಚಾರವಾಗಿ ಮುಂದೆ ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಡೀ ರಾಜ್ಯದ ಜನಪರ ಸಂಘಟನೆಗಳು ಮತ್ತು ನಾಗರಿಕ ಸಮಾಜ ಒಂದೆಡೆ, ಸರಕಾರ ಮತ್ತೊಂದೆಡೆ ಎಂಬಂತಾಗಿದೆ. ಅಷ್ಟು ಮಾತ್ರವಲ್ಲ ಇಂದು ಸಂಯುಕ್ತ ಕಿಸಾನ್ ಮೋರ್ಚಾ, ಎನ್‍ಎಪಿಎಂ, ಮಾನವ ಹಕ್ಕು ಸಂಘಟನೆಗಳನ್ನು ಒಳಗೊಂಡಂತೆ ಅನೇಕ ರಾಷ್ಟ್ರೀಯ ಸಂಘಟನೆಗಳು ಈ ಹೋರಾಟಕ್ಕೆ ಬಂಬಲ ಸೂಚಿಸಿವೆ. ಇಷ್ಟೆ ಲ್ಲಾ ಆಗಿದ್ದರೂ ಎಲ್ಲರೂ ಸಿದ್ದರಾಮಯ್ಯನವರ ಸರಕಾರದ ಬಗ್ಗೆ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಪೂರ್ಣ ವಿಶ್ವಾಸ ಕಳೆದುಕೊಳ್ಳದೆ ಸಕರಾತ್ಮಕ ತೀರ್ಮಾನ ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ನಮ್ಮೆಲ್ಲಾ ನಿರೀಕ್ಷೆಗಳು ಹುಸಿಯಾಗಿ, ರೈತರ ಹಿತಕ್ಕೆ ವಿರುದ್ಧವಾಗಿ, ಹಾಗೂ ಒಟ್ಟಾರೆ ಆಹಾರ ಭದ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳದೆ ಕಂಪೆನಿಗಳ ಪರ ನಿಲುವನ್ನೇ ಕಾಂಗ್ರೆಸ್ ಪಕ್ಷ ತೆಗೆದುಕೊಂಡರೆ ಇದರ ರಾಜಕೀಯ ಪರಿಣಾಮಗಳು ತೀವ್ರ ಸ್ವರೂಪದವು ಮತ್ತು ದೂರಗಾಮಿಯಾಗಿರುತ್ತವೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ನಾಗರಿಕ ಸಮಾಜದ ನಡುವೆ ರೂಪುಗೊಂಡಿದ್ದ ಸಮಾನ ನೆಲೆಯೂ ಕುಸಿದುಬೀಳುತ್ತದೆ. ಕಾಂಗ್ರೆಸ್ ಸರಕಾರದ ವಿರುದ್ಧ ಪೂರ್ಣಪ್ರಮಾಣದ ಹೋರಾಟ ಸಿಡಿಯುವುದು ಖಚಿತ. ಇದು ಅಖಿಲ ಭಾರತ ಸ್ವರೂಪವನ್ನೂ ಪಡೆದುಕೊಳ್ಳಬಹುದು. ದಿಲ್ಲಿಗೂ ತಲುಪಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಜುಲೈ 15 ಕರ್ನಾಟಕದ ಮಟ್ಟಿಗೆ ದುರಂತದ ದಿನವಾಗದಿರಲಿ, ವಿಶ್ವಾಸವನ್ನು ಬಲಪಡಿಸುವ ಮತ್ತು ಸಮಸ್ತರನ್ನೂ ಒಳಗೊಳ್ಳುವ ಭವಿಷ್ಯವನ್ನು ರೂಪಿಸುವ ದಿನವಾಗಲಿ ಎಂದು ನಾವು ಹಾರೈಸುತ್ತೇವೆ. ಅದಾಗಬೇಕಾದರೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯವಾಗಿ ರಾಹುಲ್‍ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಗಳ ಮನೋಬಲಕ್ಕೆ ಬೆನ್ನುಲುಬಾಗಿ ನಿಲ್ಲುವ ಅಗತ್ಯವಿದೆ. ‘ಈ ಬಲವಂತದ ಭೂಸ್ವಾಧೀನವನ್ನು ಕೈಬಿಡಿ’ ಎಂದು ಸ್ಪಷ್ಟ ಸಂದೇಶ ರವಾನಿಸಬೇಕಿದೆ ಎಂದು ಪತ್ರದಲ್ಲಿ ಕೋರಲಾಗಿದೆ.
ಈ ಪತ್ರದಲ್ಲಿ ಬಡಗಲಪುರ ನಾಗೇಂದ್ರ, ಇಂದೂಧರ ಹೊನ್ನಾಪುರ, ಎಸ್.ವರಲಕ್ಷ್ಮೀ, ಎಚ್.ಆರ್. ಬಸವರಾಜಪ್ಪ, ಗುರುಪ್ರಸಾದ್ ಕೆರಗೋಡು, ಕೆ.ವಿ.ಭಟ್, ಚುಕ್ಕಿ ನಂಜುಂಡಸ್ವಾಮಿ, ಮಾವಳ್ಳಿ ಶಂಕರ್, ಬಿ.ಅಮ್ಜದ್, ಎಸ್.ಆರ್.ಹಿರೇಮಠ, ವಿ.ನಾಗರಾಜ್, ಪಿ.ಪಿ.ಅಪ್ಪಣ್ಣ, ನೂರ್ ಶ್ರೀಧರ್, ಯು.ಬಸವರಾಜು, ಟಿ.ಯಶವಂತ, ಕುಮಾರ್ ಸಮತಳ ಸಹಿತ ಹಲವರು ಸಹಿ ಮಾಡಿದ್ದಾರೆ.