×
Ad

ಕರೆನ್ಸಿ ನೋಟುಗಳ ಮೇಲೆ ಡಾ.ಅಂಬೇಡ್ಕರ್ ಭಾವಚಿತ್ರ ಮುದ್ರಿಸಲು ಆಗ್ರಹಿಸಿ ಪ್ರಧಾನಿಗೆ ಲೋಹಿಯಾ ವಿಚಾರ ವೇದಿಕೆ ಪತ್ರ

Update: 2025-07-19 23:15 IST

ಡಾ.ಬಿ.ಆರ್.ಅಂಬೇಡ್ಕರ್

ಬೆಂಗಳೂರು : ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಭಾರತೀಯ ಕರೆನ್ಸಿ ನೋಟುಗಳ ಮೇಲೆ ಮುದ್ರಿಸಬೇಕು ಎಂದು ಆಗ್ರಹಿಸಿ ಡಾ.ರಾಮ್‍ಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್.ಶಿವಣ್ಣ, ಪ್ರಧಾನ ಮಂತ್ರಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕರೆನ್ಸಿ ನೋಟುಗಳಲ್ಲಿ ಡಾ.ಅಂಬೇಡ್ಕರ್ ಚಿತ್ರದ ಮುದ್ರಣದಿಂದ ಕೇವಲ ರಾಷ್ಟ್ರೀಯ ಐಕಾನ್‍ಗೆ ಮಾತ್ರ ಗೌರವ ಸೂಚಕವಲ್ಲ, ಬದಲಾಗಿ ಜಾತಿ, ಮತದ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಯ ಘನತೆಯು ಶ್ರೇಷ್ಟವಾಗಿದೆ ಎಂಬುದನ್ನು ದೇಶಾದ್ಯಂತ ಲಕ್ಷಾಂತರ ಜನರಿಗೆ ಪ್ರತಿನಿತ್ಯ ನೆನಪಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜಾತಿ ನಿರ್ಮೂಲನೆ ಮತ್ತು ಭಾರತೀಯ ಸಮಾಜದ ಅಂಚಿನಲ್ಲಿರುವ ವರ್ಗಗಳ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಒಬ್ಬ ಉನ್ನತ ಬುದ್ಧಿಜೀವಿ, ನ್ಯಾಯಶಾಸ್ತ್ರಜ್ಞ ಮತ್ತು ಸಾಮಾಜಿಕ ಸುಧಾರಕರಾಗಿ ನಮ್ಮೊಂದಿಗೆ ಉಳಿದುಕೊಂಡಿದ್ದಾರೆ. ಸಮಾನತೆಯ ಭಾರತಕ್ಕಾಗಿ ಅವರ ದೃಷ್ಟಿಕೋನವು ಇಂದಿಗೂ ಪ್ರಸ್ತುತವಾಗಿದೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಶಿವಣ್ಣ ತಿಳಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಭಾರತೀಯ ಕರೆನ್ಸಿ ನೋಟುಗಳ ಮೇಲೆ ಮುದ್ರಿಸಿದರೆ ಮಹಾತ್ಮ ಗಾಂಧಿಯವರ ಗೌರವ ಯಾವುದೇ ರೀತಿಯಲ್ಲಿ ಕುಗ್ಗಿಸುವುದಿಲ್ಲ. ಬದಲಾಗಿ, ಆಧುನಿಕ ಭಾರತವನ್ನು ರೂಪಿಸಲು ಸಹಾಯ ಮಾಡಿದ ಇತರ ಪ್ರಮುಖ ವ್ಯಕ್ತಿಗಳನ್ನು ಗುರುತಿಸುವ ಮೂಲಕ ನಮ್ಮ ರಾಷ್ಟ್ರೀಯತೆ ವಿಸ್ತರಿಸಲು ಪ್ರಯತ್ನಿಸುವಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಅಗತ್ಯ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು ಎಂದು ಬಿ.ಎಸ್.ಶಿವಣ್ಣ, ಪ್ರಧಾನಿ ಮೋದಿ ಅವರನ್ನು ಮನವಿ ಮಾಡಿದ್ದಾರೆ. ಪತ್ರದಲ್ಲಿ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ್ ಗೌಡ, ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ, ಇಂದೂಧರ ಹೊನ್ನಾಪುರ, ಡಾ.ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಮತ್ತಿತರರ ಪತ್ರದಲ್ಲಿ ಸಹಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News