ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳು ಪತ್ತೆ: ಪ್ರಕರಣ ದಾಖಲು
Update: 2025-07-23 22:22 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದ ಕಲಾಸಿಪಾಳ್ಯದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಶೌಚಾಲಯದ ಮುಂಭಾಗ ಪ್ಲಾಸ್ಟಿಕ್ ಚೀಲದಲ್ಲಿ ಸ್ಫೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್‍ಗಳು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಮೂತ್ರ ವಿಸರ್ಜಿಸಲು ಬುಧವಾರ ಮಧ್ಯಾಹ್ನ ಸಾರ್ವಜನಿಕ ಶೌಚಾಲಯಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಆರು ಜಿಲೆಟಿನ್ ಕಡ್ಡಿಗಳು ಹಾಗೂ ಕೆಲ ಡಿಟೋನೇಟರ್‍ಗಳಿರುವ ಬ್ಯಾಗ್ ಇಟ್ಟು ಪರಾರಿಯಾಗಿದ್ದಾನೆ. ಶೌಚಾಲಯ ನಿರ್ವಹಣೆ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ತಂಡವನ್ನು ಕರೆಯಿಸಿ ತಪಾಸಣೆ ನಡೆಸಿದಾಗ ಸ್ಫೋಟಕ ವಸ್ತುಗಳು ಕಂಡುಬಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಕಲಾಸಿಪಾಳ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.