ಪಿಎಸ್ಸೈ ಹಲ್ಲೆಯಿಂದ ಶಾಶ್ವತ ಕಿವುಡನಾದ ಯುವಕ: ಆರೋಪ
ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣೆಯ ಪಿಎಸ್ಸೈ ಪುನೀತ್ ಎಂಬುವರು ಯುವಕನೋರ್ವನ ಮೇಲೆ ಗಂಭೀರ ಹಲ್ಲೆ ನಡೆಸಿದ ಪರಿಣಾಮ ಆತ ಶಾಶ್ವತವಾಗಿ ಕಿವುಡನಾಗಿರುವ ಆರೋಪ ಕೇಳಿಬಂದಿದೆ.
ಉದಯ ಕುಮಾರ್(26) ಎಂಬ ಯುವಕನ ಮೇಲೆ ಪಿಎಸ್ಸೈ ಪುನೀತ್ ಹಲ್ಲೆ ಮಾಡಿದ್ದು, ಇದರ ಪರಿಣಾಮ ಕಿವಿ ಕೇಳಿಸದೆ ಶ್ರವಣ ದೋಷ ಉಂಟಾಗಿದೆ ಎಂದು ಆರೋಪಿಸಿ ಪಿಎಸ್ಸೈ ಪುನೀತ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ನಗರ ಪೊಲೀಸ್ ಆಯುಕ್ತರಿಗೆ ವಕೀಲರೊಬ್ಬರು ದೂರು ಸಲ್ಲಿಕೆ ಮಾಡಿದ್ದಾರೆ.
ಶನಿವಾರ ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದಯ್ ಕುಮಾರ್, ಜು.17ರಂದು ನನ್ನ ಮನೆಯ ಮಾಲಕರೊಂದಿಗೆ ವಾಗ್ವಾದ ನಡೆದಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬೇಗೂರು ಠಾಣಾ ವ್ಯಾಪ್ತಿಯ ಹೊಯ್ಸಳ ವಾಹನ ಸಿಬ್ಬಂದಿ ನನ್ನನ್ನು ಠಾಣೆಗೆ ಕರೆದೊಯ್ದರು. ಆಗ ಪಿಎಸ್ಸೈ ಪುನೀತ್ ಉದ್ದೇಶ ಪೂರಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ತದನಂತರ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವುದು ಗೊತ್ತಾಯಿತು ಎಂದು ಹೇಳಿದರು.