ಕಾಂಗ್ರೆಸ್ ನಾಯಕರಿಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ : ಬಸವರಾಜ ಬೊಮ್ಮಾಯಿ
ಗದಗ : ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಿ ಆಗಿದ್ದ ಇಂಟರ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಡೆದು, ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಅವರ(ಕಾಂಗ್ರೆಸ್)ಕೊಡುಗೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಏನಾದರೂ ಪ್ರಗತಿ ಮಾಡಿದ್ದರೆ ಅದು ಬಿಜೆಪಿ ಸರಕಾರದ ಅವಧಿಯಲ್ಲಿ. ಕಾಂಗ್ರೆಸ್‍ನವರು ನ್ಯಾಯಮಂಡಳಿ ಮಾಡಿ ಅದಕ್ಕೆ ನಾಲ್ಕು ವರ್ಷ ಕಚೇರಿ ಕೊಡಲಿಲ್ಲ ಎಂದು ಹೇಳಿದರು.
ಮಹದಾಯಿ ಯೋಜನೆಗೆ ಡಿಪಿಆರ್ ಮಾಡಿ ಒಪ್ಪಿಗೆ ಪಡೆದಿದ್ದು ಕೇಂದ್ರದ ಎನ್‍ಡಿಎ ಸರಕಾರ, ಪರಿಸರ ಅನುಮತಿಯನ್ನೂ ಬಿಜೆಪಿ ಸರಕಾರವೇ ಕೊಡಿಸಿದೆ. ಕಾಂಗ್ರೆಸ್ ಒಂದೇ ಒಂದು ಕೆಲಸ ಮಾಡಿದ್ದು, ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕ್ ಕೆನಾಲ್ ಮಾಡಿದ್ದನ್ನು ತಡೆದು ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಕಾಂಗ್ರೆಸ್ ಕೊಡುಗೆ ಎಂದು ದೂರಿದರು.
ಗೋವಾ ಸಿಎಂ ಹೇಳಿಕೆಗೆ ಖಂಡನೆ: ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಂದಾಗಿದ್ದೇವೆ. ನಾನು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸುತ್ತೇನೆ. ಒಂದು ರಾಜ್ಯದ ಹಿತಾಸಕ್ತಿಗೆ ಇಷ್ಟು ದೊಡ್ಡ ರಾಜಕೀಯ ಆಟ ಆಡುವ ಅವಶ್ಯಕತೆ ಇಲ್ಲ. ಅವರು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಕಾಂಗ್ರೆಸ್ ನಾಯಕರಿಗೆ ಮಹದಾಯಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‍ನವರಿಗೆ ಯಾವ ನೈತಿಕ ಹಕ್ಕಿದೆ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಸೂರ್ಯನಿಗೆ ಹೋಲಿಕೆ: ಪರಿಷತ್ ಸದಸ್ಯ ಡಾ.ಯತೀಂದ್ರ ಅವರು ತಮ್ಮ ತಂದೆಯ ಸಾಧನೆ ಹೇಳಲು ಒಡೆಯರ್‍ಗೆ ಹೋಲಿಕೆ ಮಾಡಿದ್ದಾರೆ. ಸೂರ್ಯನಿಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯವೇ? ಸೂರ್ಯ ಸೂರ್ಯನೇ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.