ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್
ಬೆಂಗಳೂರು : ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಬಿ.ಸಿ.ಪಾಟೀಲ್ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ಬಿ.ಸಿ.ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿ.ಸಿ.ಪಾಟೀಲ್ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಭೇಟಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.
ಎಂತಹ ಚಿಲ್ಲರೆ ಮನಸ್ಸು: ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್, 'ಏನ್ರಿ.. ಎಂತಹ ಚಿಲ್ಲರೆ ಮನಸ್ಸು ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಂದಿದ್ದೇನೆ. ಆದರೆ, ಈ ದೇಶದ ಸಂಸ್ಕೃತಿಯನ್ನು ನಾನು ಯಾವತ್ತು ಬಿಟ್ಟಿಲ್ಲ. ಸಿದ್ದರಾಮಯ್ಯನವರು ಮತ್ತು ನನ್ನ ಸಂಬಂಧ ಬಹಳ ವರ್ಷ ಹಳೆಯದು' ಎಂದು ಉಲ್ಲೇಖಿಸಿದ್ದಾರೆ.
'ಮುಖ್ಯಮಂತ್ರಿ ಹೊಸದಿಲ್ಲಿಯ ಕರ್ನಾಟಕ ಭವನಕ್ಕೆ ಬಂದಿದ್ದು, ನಾನು ಅಲ್ಲಿದ್ದಾಗ ಅವರನ್ನು ಭೇಟಿ ಮಾಡಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬಹಳ ಚಿಲ್ಲರೆ ಅನ್ನಿಸುದಿಲ್ಲವೇ. ಚಿಲ್ಲರೆ ಬುದ್ದಿಜನ ಚಿಲ್ಲರೆ ವಿಚಾರ ಮಾಡುತ್ತಾರೆ, ಎನ್ನುವುಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ?' ಎಂದು ಬಿ.ಸಿ.ಪಾಟೀಲ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ