×
Ad

‘ಅರಿವು ಯೋಜನೆ’ ಪರೀಕ್ಷಾ ಪ್ರಾಧಿಕಾರಕ್ಕೆ ಕೆಎಂಡಿಸಿಯಿಂದ ಒಪ್ಪಂದ ಪತ್ರ ಹಸ್ತಾಂತರ

Update: 2025-07-30 22:00 IST

ಬೆಂಗಳೂರು : 2025-26ನೆ ಸಾಲಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಅರಿವು ಯೋಜನೆಯಡಿ ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಬುಧವಾರ ಒಪ್ಪಂದ ಪತ್ರ ಹಸ್ತಾಂತರ ಮಾಡಿದರು.

ಈ ಸಾಲಿನಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 5890 ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಕೆಎಂಡಿಸಿ 50 ಸಾವಿರದಿಂದ 5 ಲಕ್ಷ ರೂ. ವರೆಗೆ 20 ಕೋಟಿ ರೂ. ಶಿಕ್ಷಣ ಸಾಲ ಒದಗಿಸಲಿದೆ. ಸಿಇಟಿ ಹಾಗೂ ನೀಟ್ ಮೂಲಕ ಆಯ್ಕೆ ಆದವರಿಗೆ ರಾಜ್ಯ ಪರೀಕ್ಷಾ ಪ್ರಾಧಿಕಾರದ ಮೂಲಕ ಶುಲ್ಕ ಭರ್ತಿ ಮಾಡಲಿದೆ.

ಇದೇ ಸಂದರ್ಭದಲ್ಲಿ 2024-24 ನೇ ಸಾಲಿನಲ್ಲಿ ಶಿಕ್ಷಣ ಸಂಸ್ಥೆ ಗಳಿಗೆ ಅರಿವು ಶಿಕ್ಷಣ ಸಾಲ ಯೋಜನೆಯಡಿ 1018 ವಿದ್ಯಾರ್ಥಿಗಳಿಗೆ ಬಾಕಿ ಹಣ 12.50 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಕೆಲವು ತಾಂತ್ರಿಕ ಕಾರಣದಿಂದ ಶಿಕ್ಷಣ ಸಂಸ್ಥೆಗಳಿಗೆ ಹಣ ಸಂದಾಯ ಆಗಿರಲಿಲ್ಲ. ಈ ಕುರಿತು ಮಾಹಿತಿ ಪಡೆದ ಝಮೀರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಂಡರು.

ಈ ಸಂದರ್ಭದಲ್ಲಿ ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ ಅಫ್ಝಲ್ ಪಾಷಾ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಶಿಕ್ಷಣ ತಜ್ಞ ಆಗಾ ಸುಲ್ತಾನ್, ಖಾಲಿದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News